Friday, May 17, 2013

ನಾತಿಚರಾಮಿ ಮಂತ್ರವನು ಬಲ್ಲವನೊಂದಿಗೆ ಹೆಜ್ಜೆಯನು ಇಡುತ ನಡೆಯುವ ಸುಂದರ ಸಮಯವಿದು


Add caption
ಕಣ್ಣಲಿ ಕನಸು ಅರಳಿ... ಕಾಲಲಿ ಲಜ್ಜೆ ಉರುಳಿ ನಡೆಯುವ ಮದುವೆಯಲಿ ನನ್ನ ಅರ್ಧವು ನೀನು, ನಿನ್ನ ಸರ್ವವು ನಾನು ಅನ್ನೋ ಅನುರಾಗದಲಿ .... ನಕ್ಷತ್ರದ ಪಲ್ಲಕ್ಕಿಯ ಮೇಲೆ ಕುಳಿತು ಹೃದಯಗಳು ನಡಿಬೇಕು ಮೂರು ಹೊತು, ಈಡೀ ಸೃಷ್ಟಿಯು ಕೈಚಾಚಿ ದೃಷ್ಟಿ ತೆಗೆಯೋ ಅಪರೂಪದ ನಮ್ಮ ಜೋಡಿಯು ಎಂದಿಗೂ ಹೊಸತು....

ಮದುವೆ - ಬಹುದಿನದ ಕನಸದು. ಏನೋ ನಿರೀಕ್ಷೆ. ಅದೇನೋ ಸಂಭ್ರಮ. ಸಂತೋಷ, ಸಡಗರ, ಜೊತೆಗೊಂದಿಷ್ಟು ಅಳುಕು. ಕೊನೆಗೂ ಆ ದಿನ ಬಂದಿದೆ. "ಮಾಂಗಲ್ಯಮ್‌ ತಂತುನಾನೇನ ಮಮ ಜೀವನ ಹೇತುನಾ.. ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್‌’’ ಎನ್ನುವ ಮಂತ್ರದ ಜೊತೆಯಲ್ಲಿ ಗಟ್ಟಿಮೇಳ, ಶುಭಾಶೀರ್ವಾದದ ಅಕ್ಷತೆಕಾಳು, ಹಿರಿಯರ ಆಶೀರ್ವಾದ, ಕಿರಿಯರ ಹಾರೈಕೆ ಮೇಳೈಸುವ, ಸಂಭ್ರಮದಲ್ಲಿ ಸಪ್ತಪದಿ ತುಳಿದು, ಕನಸಿನಂತೆ ಬದುಕಿಗೆ ಪ್ರವೇಶಿಸುವ ಈ ದಿನ ಪ್ರತಿ ಹೆಣ್ಣು-ಗಂಡಿನ ಜೀವನದ ಬಹುದೊಡ್ಡ ಕನಸು. 

ಮದುವೆಯ ಮೂಲ ಉದ್ದೇಶ ಇಹಲೋಕವನ್ನು ಬೆಳೆಗಿಸುವುದು. ಮದುವೆಗು ಇಹಲೋಕದ ಬೆಳೆಗುವಿಕೆಗೂ ಎಂಥ ಸಂಬಂಧವೆನ್ನುತ್ತಿರಾ? ಜಗತ್ತು ಬೆಳಗಲು ಬೇಕು ಜೀವಿಗಳ ಸೃಷ್ಟಿ ಜೀವಿಗಳ ಸೃಷ್ಟಿಗೆ ಬೇಕು ಸ್ತ್ರೀ-ಪುರುಷ ಸಂಗಮ. ಜಗತ್ತು ಬೆಳಗಬೇಕಾದರೆ ಉತ್ತಮ ಪ್ರಜೆಗಳ ಅಗತ್ಯವಿದೆ. ಉತ್ತಮ ಪ್ರಜೆಗಳ ಸೃಷ್ಟಿಗಾಗಿಯೇ ಈ ವಿವಾಹ ಮಹೋತ್ಸ್ವ. ಸ್ಮುದ್ರಮಥನ ಕಾಲದಲ್ಲಿ ಲಕ್ಷ್ಮೀನಾರಾಯಣರ ಕಲ್ಯಾಣೋತ್ಸವ ನೆಡೆಯಿತು ಎನ್ನುತ್ತದೆ ಪುರಾಣಗಳು, ಜಗತ್ತಿನ ಕಲ್ಯಾಣವಾಗಬೇಕಾದರೆ ಜಗದೊಡೆಯ ನಾರಾಯಣನಿಗೆ ಲಕ್ಷ್ಮೀ ಜೊತೆ ಕಲ್ಯಾಣವಾಗಬೇಕು.ಆಗಿದೆ ಕೂಡ.


ಕಂಬು ಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಎತ್ತಿದರು ಮುತ್ತಿನಾರತಿಯ ಮುತ್ತಯ್ದೆಯರು

ನಾನು ಹಣೆಯ ಮೇಲೆ ಯಾವಗಲು ಕುಂಕುಮದ ಬಿಂದಿ ಇಟ್ಟವಳಲ್ಲ... ಈ ಕುಂಕುಮದ ಬಿಂದಿಗೆ ನಮ್ಮ ಸಂಪ್ರಾದಯದಲ್ಲಿ ತುಂಬ ಮಹತ್ವವಿದೆ.. ನಾ ಹಿಂದೆ ಎಲ್ಲೊ ಕೇಳಿದ್ದೆ ಕುಂಕುಮ ಇಟ್ಟ ಹೆಣ್ಣಿನ ಮುಖವನ್ನ ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಕುಂಕುಮದ ಮೇಲೆಯೇ ಕೇಂದ್ರೀಕ್ರತವಾಗತ್ತೆ ಮತ್ತು ಅವಳ ಬೇರೆ ಯಾವ ಸೌಂದರ್ಯವನ್ನು ನೋಡಿ ಚಂಚಲಚಿತ್ತರಾಗಲು ಅವಕಾಶವಿರುದಿಲ್ಲವಂತೆ... ಅಂತ ಕುಂಕುಮವು ಮದುವೆಯ ಈ ದಿನ ಖುಶ್ ಖುಶಿಯಿಂದ ಇಟ್ಕೊಳ್ತಾ ಇದೀನಿ

ಹುಡಿಗಿಯರ ಕೈ ಬಳೆ ನಾದಕ್ಕೆ ಸೋಲದ ಹುಡಗರಿಲ್ಲ ಅಂತ ಕೇಳಿದ್ದೆ ಆದ್ರೆ ನನ್ನ  ಕೈ ಬಳೆ ನಾದಕ್ಕೆ ನನ್ನ ಮನಸ್ಸಿನಲ್ಲಿರುವವನು ಸೋಲಲೇ ಇಲ್ಲ.. ಯಾವಗಲು ಒಂದು ಕೈಗೆ ಬಳೆ ಇನೋಂದು ಕೈಗೆ ವಾಚ್ ಕಟ್ಟುವ ನಾನು ಇವತ್ತು ಎರಡು ಕೈಗೆ ಗಾಜಿನ ಬಳೆಗಳನ್ನು ಹಾಕಿಕೊಳ್ಳುತ್ತಿದ್ದೇನೆ ... ನಮ್ಮ ದೇಶದಲ್ಲಿ ಬಳೆಗಳು ಗಂಡನ ಅದ್ರಷ್ಟದ ಸಂಕೇತ ಅನ್ನುತ್ತಾರೆ , ಅದ್ರೆ ನಾನಂತು ಎಲ್ಲಾದರಲ್ಲಿ ನತದ್ರಷ್ಟೆ, ಇನ್ನು ಬಳೆಗಳು ನನ್ನ ಗಂಡನ ಅದ್ರಷ್ಟ ಯಾವಗ ಬದಲಾಯಿಸುತ್ತದೆ ಅಂತ ನೋಡಬೇಕು..........





ಸೀರೆಯನ್ನ ಭಾರತ ಸಂಸ್ಕ್ರತಿಯ ಸಂಕೇತ ಅನ್ನೋಹಾಗೆ ಸೀರೆಯನ್ನುಟು, ಈ ಹಿಂದೆ ನನ್ನವನು ನನ್ನ ಕಾಲಿಗೆ ಕಾಲುಂಗರ ತೊಡಿಸಿದ್ದ ಬೆಳ್ಳಿ ಕಾಲುಂಗುರ ವನ್ನ ಇವತ್ತು ಸಂಬ್ರಮದಿಂದ ಹಾಕಿಕೊಳ್ಳುತ್ತಾ ಇದೀನಿ.....

ಇವತ್ತಿನಿಂದ ನನ್ನ ಹೊಸ ಜೀವನ ಪ್ರಾರಂಬಿಸಬೇಕು ಅಂತ ಅಂದು ಕೊಂಡಿದ್ದೇನೆ. ಈ ಹೊಸ ಜೀವನದ ಹೆಜ್ಜೆ ನಮ್ಮಿಬ್ಬರ ಮನೆಯಲ್ಲಿರುವವರ ಮಖದಲ್ಲಿ ಸಂತೊಷ ತರುವಾಗೆ ಇತ್ತು... ಅಂತು ಇಂತು ನನ್ನ ಎಲ್ಲರ ಇಷ್ಟದಂತೆ ನನ್ನ ಮದುವೆಯಂತು ಅಯಿತು...


ಮೂರು ಗಂಟು ಬೆಸೆದು, ಮೂರು ಕಾಲದಲ್ಲೂ ಸಹ ಜೊತೆಗಿದ್ದು, ಸುಂದರ ಜೀವನ ಕೊಡುತ್ತೇನೆ ಎನ್ನುವ ಅರ್ಥದಲ್ಲಿ ಕಟ್ಟಿರುವ ತಾಳಿ ಎಷ್ಟೇ ಚಿನ್ನದ ಒಡವೆಗಳಿದ್ದರೂ ಇದಕ್ಕಿಂದ ಪಾವಿತ್ರ್ಯತೆ ಒಂದಿಷ್ಟು ಸಹಾ ಕುಗ್ಗುದಿಲ್ಲವಂತೆ ,ದಾಂಪತ್ಯದಲ್ಲಿ ಎಷ್ಟೇ ಅಪಸ್ವರಗಳಿದ್ದರೂ, ಎಷ್ಟೇ ಅಸಮಾಧಾನಗಳಿದ್ದರೂ, ಎರಡು ಹೃದಯಗಳನ್ನು ಬೆಸೆಯುವ ಮಂಗಳಸೂತ್ರದ ಶಕ್ತಿ ಅಪರಿಮಿತ ಎನ್ನುತ್ತಾರೆ ಅಂತ ಪವಿತ್ರ ತಾಳಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ.

ಮದುವೆಯಲ್ಲಿ ಗಂಡನಿಂದ ಹೆಣ್ಣು ಎನೆಲ್ಲ ಭಾಗ್ಯವನ್ನು ಪಡೆದುಕೊಳ್ಳುತ್ತಾಳೆ ಅಲ್ವಾ? ಅರಸಿನ, ಕುಂಕುಮ, ಕಾಲುಂಗುರ ಭಾಗ್ಯ, ತಾಳಿಯ ಬಾಗ್ಯ, ಹಾಲು ಜೇನು ಬೇರೆತಿರೋ ಹಾಗೆ ಪ್ರೇಮ ಇಡುವವನು, ಮಾತು ಮಾತಿಗೂ ನಗಿಸಿ ಮುತ್ತನು ಕೊಡುವವನು, ಸಾಯೋತನಕ ನನ್ನ ರನ್ನ ಚಿನ್ನ ಅನ್ನೋನು, ಪ್ರೀತಿ ಪ್ರೇಮ ಅನ್ನೋದಕ್ಕೆ ಅರೆಮನೆಯಾಕ್ಬೇಕು, ಸ್ವರ್ಗ ಮೀರಿಸೋ ಸುಖ ಪಡೆಯೋಕೆ ಗುಡಿಸಲಾದ್ರೆ ಸಾಕು, ಸಂಪತ್ತು ಉಕ್ಕಿ ಹರಿತಿದ್ದರೇನು ಎದೆಯು ಬತ್ತಿರುತೈತೆ. ಒಂದಾದ ಮನಸಿನ್ಯಾಗ ಗಂಡನ್ನ ಕೂಡಿದ್ರೆ ಸ್ವರ್ಗ ಮರಿತೈತೆ.

ಮದುವೆ ಅನ್ನೋದು ಅನುರಾಗದ ಸಂಗಮ, ಅನುಬಂಧದ ಸಂಗಮ ಎರದು ಹೃದಯಗಳು ಬೆರೆತು ಬಾಳುವ ಮಧುರ ಮಹೋತ್ಸವವದು. ಮೂರು ಗಂಟಿನಿಂದ ಮದುವೆ ಪೂರ್ಣವಾಗದು, ಸಪ್ತಪದಿಯ ಮೀರಿದಂತ ಜೀವನ ಇದು, ಅಷ್ಟಪದಿಗೆ ಸಾಗುವಂತ ಪ್ರೇಮ ಪದವು ಇದು, ನಾತಿಚರಾಮಿ ಮಂತ್ರವನು ಬಲ್ಲವನೊಂದಿಗೆ ಹೆಜ್ಜೆಯನು ಇಡುತ ನಡೆದರೆ ಬದುಕ ಬೆಳಗಿಸೋ ಸುಂದರ ಸಮಯವಿದು, ಮುಗಿಯದ ಪಯಣವಿದು,

ನಮ್ಮಿಬ್ಬರ ಈ ಬಂಧ ಅಳಿಯದೆ ಕೊನೆಯವರೆಗೂ ಉಳಿಯಲಿ ನಮ್ಮ ಬಾಳಿನಲ್ಲಿ ನಾವು ಹೆಜ್ಜೆ ಇಡುವ ಆ ದಾರಿಯಲ್ಲಿ ನಮ್ಮಿಬ್ಬರ ಹೆಜ್ಜೆಗಳು ಎಂದೂ ಏರುಪೇರಾಗದೇ ಸರಿಸಮಾನವಾಗಿ ಸಾಗುತ್ತಿರಲಿ, ನಾ ನಡೆಯುವ ಈ ಹೊಸ ಹಾದಿಯಲ್ಲಿ ಕಲ್ಲು ಮುಳ್ಳುಗಳಿರದಿರಲಿ, ಕೇವಲ ಹೂವುಗಳಿರಲಿ, ಹಕ್ಕಿಗಳ ಚಿಲಿಪಿಲಿಗಳಿರಲಿ, 

ಹೊಸ ಅನುಭವಗಳಿರಲಿ, ಹೊಸ ನಗು ಇರಲಿ. ಹೊಸ ಆಸೆ, ಹೊಸ ಬಯಕೆ, ಸಂತೋಷ, ಸಡಗರ, ಹೊಸ ಗೆಳೆತನ ಇರಲಿ, ಮನಸು ಬಿಚ್ಚಿ ಭಾವನೆ ಹಂಚಿಕೊಳ್ಳವ ಪ್ರೀತಿ ಪಾತ್ರದವನು ಇವನಾಗಲಿ.


ಯಾರಿಗ್ಗೊತ್ತು, ಎಲ್ಲಿಯೂ ಸಿಗದ ಅಮೂಲ್ಯ ಪ್ರೀತಿ ಇವನಲ್ಲಿಯೇ ಸಿಗುಬಹುದು. ವಿಷಾದಗಳೆಲ್ಲವನ್ನೂ ಕಟ್ಟಿಟ್ಟು, ಹೊಸ ಜೀವನಕ್ಕೆ, ಹೊಸ ಪ್ರೀತಿಗೆ ಮೈ ಒಡ್ಡಿ, ಹೊಸ ಗುರಿಗಳೊಂದಿಗೆ ಹೊಸ ಬದುಕಿಗೆ ಕಾಲಿಡುತಿರುವ ನನಗೆ ನಿಮ್ಮೆಲ್ಲರ ಹರಕೆ ಹಾರೈಕೆಗಳಿರಲಿ.

Wednesday, August 1, 2012

♥♥ ನಿನ್ನ ಪ್ರೀತಿಯನ್ನು ಮತ್ತೆ ಕರುಣಿಸಿದ ಆ ದೇವರಿಗೆ ಕೋಟಿ ನಮನ ♥♥

ನಾನು ಸಾಮಾನ್ಯವಾಗಿ ಮಧ್ಯಾಹ್ನಗಳಲ್ಲಿ ಹೀಗೆ ಬರೆಯಲು ಕೂರುವುದಿಲ್ಲ. ಮಧ್ಯಾಹ್ನಗಳೇನಿದ್ದರೂ ಕೆಲಸಕ್ಕೆ ಮೀಸಲು. ಸಂಜೆ ಮಾತ್ರ ತುಂಬ ಪಕೀರ ಪ್ರೀತಿಗೆ ಮೀಸಲು ನಿನ್ನ ತೆಕ್ಕೆ, ನಿನ್ನ ಸೊಕ್ಕು, ನಿನ್ನ ಮುನಿಸು , ಅರ್ಧ ಮುಚ್ಚಿದ ಕಣ್ಣು, ನಿನ್ನ ಬಿಸಿಯಪ್ಪುಗೆ, ಕೊಟ್ಟ ಮುತ್ತು ಸಂಜೆಗಳೆಲ್ಲವೂ ಅದಕ್ಕೆ ಚೆಂದವಿತ್ತು.

ಜೀವನದಲ್ಲಿ ದೇವರು ಕೊಟ್ಟ  ಎರಡನೇ ಉಡುಗೊರೆ ನೀನು.. ದೇವರು ಕೊಟ್ಟ ಉಡುಗೊರೆ ಎಂದ ಮೇಲೆ  ಅದು ಎಷ್ಟು ಬೆಲೆಬಾಳುವಂತದ್ದು ಎಂದು ಹೇಳಲಸಾಧ್ಯ.ಅಷ್ಟು ಬೆಲೆಬಾಳುವ ನಿನ್ನನ್ನು ಕರುಣಿಸಿದ ದೇವರಿಗೆ ನನ್ನ ಕೋಟಿ ನಮನಗಳು.

ಇವತ್ತಿಗೆ ಆ ದೇವರು ಮತ್ತೆ ನನಗೆ ಕಳೆದುಕೊಂಡ ನಿನ್ನ ಪ್ರೀತಿಯನ್ನು ಕರುಣಿಸಿ ಎರಡು ವರ್ಷ ಪೂರ್ಣವಾಗಿದೆ.ಈ ಸಮಯದಲ್ಲಿ ದೇವರನ್ನು ಕೇಳೊದೊಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ. ನನ್ನ ಜೀವನದ ಕೊನೆವರೆಗೂ ಇವನ ಪ್ರೀತಿ ನನಗಿರಲಿ ಅನ್ನೊದೊಂದೇ.

ಸಿಗುವುದಾದರೆ ನಿನ್ನಂತ ಪ್ರಿಯತಮ ಸಿಗಬೇಕು. ಆಗ ಪ್ರೀತಿಸುವ ಹೃದಯಗಳಿಗೆ ಜಗತ್ತಿನಲ್ಲಿ ಬೆಲೆ ಇರುತ್ತದೆ.  ಎಂದೂ ಕೂಡ ನಿನ್ನ ಸಾಗರದಂಥ ಹೃದಯ ಶ್ರೀಮಂತಿಕೆಗೆ ಬೆಲೆಕಟ್ಟಲಾಗುವುದೇ. ಈಗಲೇ ನನ್ನ ಭವಿಷ್ಯದೆಡೆಗೆ ಚಿಂತಿಸುವ ನೀನು ಮುಂದೆ ಯಾವುದೇ ರೀತಿಯ ಕಲಹಗಳಿಗೆ ಎಡೆಮಾಡುವುದಿಲ್ಲವೆಂಬ ಪೂರ್ಣ  ನಂಬಿಕೆ ಮನಸ್ಸಿನಲ್ಲಿ ಬೇರೂರಿದೆ ಹಾಗಾಗಿ ನಿನ್ನ ಪ್ರೀತಿಯನ್ನು ಬಿಟ್ಟು ಹೋಗುವ ಮನಸ್ಸು ಬರುತಿಲ್ಲ. ಆಗಾಗ ನಮ್ಮ ಪ್ರಶಾಂತವಾದ ಪ್ರೀತಿ ಸಾಗರದಲ್ಲಿ ನಾನೇ ಜೋರು ಅಲೆಗಳನ್ನೆಬ್ಬಿಸಿದರೂ ನೀನು ಮಾತ್ರ ಮೊದಲು ರೇಗಿದರೂ ಮತ್ತೇ ಏನೂ ಆಗಿಲ್ಲವೆಂಬಂತೆ ಅದೇ ಸಾಗರದಲ್ಲಿ ನಮ್ಮ ಪ್ರೀತಿ ಪಯಣವನ್ನು ಶಾಂತವಾಗಿ ನೆಡೆಸುತ್ತೀಯ.  ನನ್ನದೆಷ್ಟು ತಪ್ಪುಗಳಿದ್ದರೂ  ಅವುಗಳೆಲ್ಲವನ್ನೂ ಒಟ್ಟಿಗೆ ಇನ್ನೂ ಪ್ರೀತಿ ಮೊಗೆ ಮೊಗೆದು ನೀಡುವ ನಿನ್ನ ಪ್ರೀತಿ ಪಡೆದ ನಾನೇ ಧನ್ಯ!. ಅಷ್ಟೊಂದು  ದೂರವಿದ್ದರೂ ಮನಸ್ಸಿನ ಕದತಟ್ಟಿ ಒಳಬಂದ ಅರಿವೇ ಇರಲಿಲ್ಲ ಇನಿಯಾ.

ಸಂಜೆ ಹರಡಿಕೊಂಡ ಆಗಸದಲ್ಲಿ ಮೊದಲ ಚುಕ್ಕಿ ಮಿನುಗುವುದರೊಳಗೆ ನಿನ್ನ ಗೂಡು ಕಟ್ಟಿ  ನಕ್ಷತ್ರದಡಿಯ ಅಂಗಳದಲ್ಲಿ ಅಂಗಾತ ಮಲಗಿಕೊಂಡು ಆಗ ಬರೆಯಬೇಕೆನಿಸುತ್ತದೆ ನಿನ್ನ ಹೆಸರು.

ಎಷ್ಟು ನೆನಪಾಗುತ್ತಿ ಗೊತ್ತಾ? ಆಳನಿದ್ದೆಯ ಮಗುವಿಗೆ ಯಾವುದೋ ಜನ್ಮದ ಪ್ರೀತಿ ನೆನಪಾದಂತೆ. ನೀನು ಮೊದಲಿನಿಂದಲೂ ಅಷ್ಟೇ. ನಿನಗಿಂತ ನಿನ್ನ ಹೆಸರು, ಮಾತು ಚೆಂದ ಅದಕ್ಕಿಂತ ನಿನ್ನ ನೆನಪು ಚೆಂದ, ಹಲವು ವರ್ಷಗಳ ಹಿಂದೆ ಸಂಜೆಯ ಹೊತ್ತಿನಲ್ಲಿ ಮನೆಯಂಗಳದಲ್ಲಿ ಕುಳಿತು ಏನೇನೋ ಹರಟುತ್ತ ಕುಳಿತಿದ್ದೇವಲ್ಲ? ಆಗ ಹೆಡೆಯುತಿತ್ತು ನೋಡು ಸಂಪಿಗೆಯ ಮಡಿಲಲ್ಲಿ ಆಸೆಗಳ ಮಿಡಿನಾಗರವೇ. ನೀನು ತುಂಬಾ ಕೆಣಕಿದಾಗ ಸುಮ್ಮನಿರಬೇಕೆನಿಸುತಿತ್ತು. ಎಲ್ಲೋ ಮೈ ಮರೆತು ಹಾಡುತ್ತಾ ಕುಳಿತಾಗ ಮೈ ತುಂಬ ಮಳೆಯಾಗಿ ಸುರಿಯಬೇಕೆನಿಸುತಿತ್ತು.

ಹೀಗೆಲ್ಲ ಯೋಚಿಸುವುದು ತೀರ ಹುಟ್ಟು ಅನಿಸಿಬಿಡುತ್ತದೇನೋ ನಿನಗೆ? ನಾನು ಉನ್ಮಾದಿ ಹುಡುಗಿ. ಪ್ರೀತಿಯ ಬಗ್ಗೆ ಮಾತನಾಡಿ ಆತ್ಮವಂಚನೆ ಮಾಡಿಕೊಳ್ಳುವುದು ನನಗಿಷ್ಟವಿಲ್ಲ. ರಕ್ತ ಮಾಂಸಗಳ ಮನುಷ್ಯ ದೇವರಂತೆ ಯಾವತ್ತು ಬದುಕಲಾರ. ಗಾಳಿಯಲ್ಲಿ ಕೊಟ್ಟ ಮುತ್ತು ಕೆನ್ನೆಗೆ ತಾಕಿ ಕರಗುವುದಿಲ್ಲ. ಹೇಳಿಕೊಳ್ಳದ ಮಾತು ಕನಸಾಗಿ ಕಣ್ತುಂಬ ಅರಳುವುದಿಲ್ಲ. ಮನಸ್ಸು ತುಂಬಾ ಭಾವನಾತ್ಮಕ ಆಗುವುದು ಕೂಡ ಮನಸ್ಸಿನ ಅಪ್ಪಣೆಯಿಂದಲೇ. ಮನಸ್ಸು ಒಪ್ಪದೇ ಹೋಗದಿದ್ದರೆ ನೀನು ಅಷ್ಟೊಂದು ದೂರವಿದ್ದರೂ ಸುಮ್ಮಸುಮ್ಮನೇ ಕಣ್ಣ ತುಂಬ ಬರುತ್ತಿರಲಿಲ್ಲ. ಸಮುದ್ರದ ಅಲೆ ಕಾಲಿಗೆ ಬಂದು ತಾಕಿದಾಗ ಎಲ್ಲೋ ದೂರದ ನಾವೆಯ ನೆತ್ತಿಯ ಮೇಲಿನ ದೀಪದಲ್ಲಿ ನಾನು ನಿನ್ನನ್ನು ಹುಡುಕುತ್ತಿರಲಿಲ್ಲ.

ಯಾವತ್ತು ಏನನ್ನೂ, ಯಾರನ್ನು ಇಷ್ಟು ಪ್ರೀತಿಸಿದವಳಲ್ಲ ನಾನು. ಎಲ್ಲರೂ ನನ್ನನ್ನು ಅದೃಷ್ಟವಂತೆ ಅಂತಾರೆ ಆದರೆ ನಾನು ಆ ಅದೃಷ್ಟವನ್ನು ನಿನ್ನಲ್ಲಿ ಹುಡುಕುತ್ತೇನೆ.

Thursday, April 12, 2012

♥♥♥ ನೀರಾಗದಿರು ನೀರೇ ♥♥♥

ಓ ಹೆಣ್ಣೇ...ಅದೆಷ್ಟು ಕಾಲದಿಂದ ನಿನ್ನ ಸಾಂಗತ್ಯ ನನಗಿಲ್ಲ ಹೇಳು... ನಾನು ಕೂಡ ಹೆಣ್ಣು ಎಂಬ ಕಾರಣಕ್ಕಾಗಿ ಅಲ್ಲ ಬದಲಾಗಿ ಹೆಣ್ಣು ನನ್ನ ಬದುಕಿನ ಒಂದು ಭಾಗ ಎಂಬ ಕಾರಣಕ್ಕಾಗಿ. ಅಂಥದೊಂದು ಅನಿವಾರ್ಯತೆಯಿಂದಾಗಿ ಮೀನಿನ ಹೆಜ್ಜೆಯನ್ನೂ ಹೆಣ್ಣಿನ ಮನಸ್ಸನ್ನು ಅರಿತವರಿಲ್ಲ ಎನ್ನುತ್ತಾರೆ ಅದೆಷ್ಟು ಸತ್ಯವೋ ನಾಕಾಣೆ ಆದರೆ ನಾನೂ ಕೂಡ ಒಬ್ಬಳು ಹೆಣ್ಣಾಗಿದ್ದರೂ ನನಗಂತೂ ನಿನ್ನ ಜಾಡನ್ನು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ ಹೆಣ್ಣೆ.. ಕಾಲ ಕಾಲಾಂತರದಿಂದ ನಾನು ಈ ಕಾರ್ಯದಲ್ಲಿ ತೊಡಗಿದ್ದೇನೆ ಎಂಬುದು ನಿನಗೆ ತಿಳಿದಿದೆಯೇ? ಬಹುಷಃ ಇಷ್ಟೊಂದು ಸಮಯ ನಾನು ವ್ಯಯಿಸಿದ್ದರೆ ಮೀನಿನ ಹೆಜ್ಜೆಯನ್ನಾದರೂ ಪತ್ತೆ ಹಚ್ಚುತ್ತಿದ್ದೆನೋ ಏನೋ...!

ಉತ್ಪ್ರೇಕ್ಷೇಯನ್ನದಿರು ಹೆಣ್ಣೇ.. ರಾತ್ರಿ ಹಗಲು ಜಾಗರಣೆ ಕೂತು ಭೂತಗನ್ನಡಿ ಹಿಡಿದು ನಿನ್ನ ಕಣ್ಣಾಲಿಗಳ ಆಳಕ್ಕೆ ಇಣುಕಿದ್ದೇನೆ. ಇಣುಕುತ್ತಿದ್ದೇನೆ.. ಇಣುಕುತ್ತಲೇ ಇದ್ದೇನೆ. ಇಂದು ನಿನ್ನೆಯಿಂದಲ್ಲ, ಯುಗ ಯುಗಾಂತರಗಳಿಂದ ಆದರೆ ಇವತ್ತು ಈ ಕ್ಷಣದವರೆಗೂ ಆ ಕಣ್ಣಾಲಿಗಳ ಒಳಗಿನ ಜಲಾಶಯ ಒಮ್ಮೆಯೂ ಕೂಡ ಬತ್ತಿ ಹೋಗಿದ್ದನ್ನು ನಾನು ಕಂಡೇ ಇಲ್ಲ.

ಎಲ್ಲೋ ಒಂದು ಕಡೆ ಓದಿದ ನೆನಪು. " ಗಂಡು- ಹೆಣ್ಣುಗಳಿಬ್ಬರನ್ನು ಸೃಷ್ಟಿಸಿದ ಭಗವಂತ ಎಲ್ಲ ಶಕ್ತಿಯನ್ನು ಪುರುಷನಿಗೆ ಕೊಟ್ಟುಬಿಟ್ಟನಂತೆ. ಆತನಿಗೆ ಸಮಸ್ಯೆಯನ್ನೂ ಕೊಟ್ಟ. ಪರಿಹರಿಸಿಕೊಳ್ಳುವ ಶಕ್ತಿಯನ್ನೂ ಕೊಟ್ಟನಂತೆ, ಆದರೆ ಹೆಣ್ಣಿಗಾದರೋ ಸಮಸ್ಯೆಯ ಗುಡ್ಡೆಯನ್ನೆ ಹೊರಿಸಿಬಿಟ್ಟ ಇದಾದ ಮೇಲೆ ಆ ಭಗವಂತನಿಗೆ ಎಲ್ಲೋ ಒಂದು ಕಡೆ ಪಶ್ಚಾತಾಪವಾಗಿರಬೇಕು. ನಾನು ಹೀಗೆ ಮಾಡಿದರೆ ಸ್ತ್ರೀಲೋಕ ನನ್ನನ್ನು ದೇವರೆಂದು ಕರೆಯಲಾರದು ಎಂಬ ಭೀತಿ ಕಾಡಿತಂತೆ. ಅದರ ಫಲವಾಗಿಯೇ ಎರಡು ಕಣ್ಣೀರ ಚಿಲುಮೆಗಳನ್ನು ಆಕೆಯ ಅಕ್ಷಿ ಪಟಲದಲ್ಲಿ ಸಿಕ್ಕಿಸಿಬಿಟ್ಟನಂತೆ. ಸಮಸ್ಯೆ ಬಂದಾಗಲ್ಲಾ ಅತ್ತು ಹಗುರಾಗಿ ಬಿಡು ಎಂದು ಹರಸಿಬಿಟ್ಟನಂತೆ"... ಇದು ನಿಜಾನಾ ಹೆಣ್ಣೇ? 

ಹಳ್ಳಿ ಹಳ್ಳಿಯ, ಕೇರಿ ಕೇರಿಯ, ಓಣಿ ಓಣಿಯ, ಮನೆಮನೆಯ ಗೋಡೆಗಳಲ್ಲಿ ಕಿವಿಕೊಟ್ಟು ಆಲಿಸಿದ್ದೇನೆ ಹೆಣ್ಣೇ.. ಅವರೆಲ್ಲ ನನ್ನಂತೆಯೇ ಎಂದು, ನನ್ನಷ್ಟೇ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದಾರೆಯೇ ಎಂದು ಆಗ ನಾನು ಅಲ್ಲಿನ ಆ ಒಳಮನೆಯ ಕಾರ್ಗತ್ತಲ ಅಡುಗೆಮನೆಯ ಒಲೆಯ ಬೆಂಕಿಯ ಮುಂದೆ ನಿನ್ನ ಬಿಕ್ಕಳಿಕೆಯನ್ನು ಕೇಳಿದ್ದೇನೆ. ಬಿಸಿಯ ಝಳಕ್ಕೆ ಸಿಕ್ಕಿ ಕರಗಿ ಹೋಗುವ ಹಿಮ ಪರ್ವತದಂತೆ ನಿನ್ನ ಕಣ್ಣಲಿಗಳಿಂದ ಜಲಧಾರೆಯಾಗಿ ಹರಿದು ಹೋದ ಪ್ರವಾಹದ ಬೆನ್ನುಹತ್ತಿ ಹೋಗಿದ್ದೇನೆ. ಆದರೆ ಅದು ಸಾಗರ ಸೇರಿದ್ದನ್ನು ಮಾತ್ರ ನಾನು ಕಂಡಿಲ್ಲ. ಅಲ್ಲಲ್ಲೆ ಹಸಿರು ಮಣ್ಣಲ್ಲಿ ಅದು ಇಂಗಿ ಹೋಗಿದೆಯಂತೆ. ಅಂತೆಯೇ ಆ ಪ್ರಶಾಂತ ಹಳ್ಳಿಗಳ ಮಣ್ಣಿನ ಕಣಕಣದಲ್ಲೂ ನನಗೆ ನಿನ್ನ ಕಣ್ಣೀರಿನ ಆರ್ದ್ರತೆಯೇ ಕಾಣುತ್ತದೆ ಕಣೇ.. ಹೋಗಲಿ ಬಿಡು ಆ ಅಡುಗೆ ಮನೆಯ ಹೊಸಿಲು ದಾಟಿ ಹೊರ ಬರುತ್ತಲೇ ನೀನು ಪ್ರಸನ್ನವದೆನೆಯಾಗಿ ಬಿಡುತ್ತಿಯಲ್ಲಾ. ಅದೇ ನನಗೆ ಆಶ್ಚರ್ಯ. ಆಗಲೇ ನಾನು ನಿರ್ಧರಿಸಿದ್ದು ಅಡುಗೆ ಮನೆ ಬರೀ ಅನ್ನದ ಕಾರಖಾನೆ ಮಾತ್ರವಲ್ಲ.. ಅದು ಹೆಣ್ಣಿನೆ ಕಣ್ಣೀರಿನ ಕಾರಖಾನೆಯೂ ಹೌದು ಎಂದು!

ಹಳ್ಳಿಯ ಹೆಣ್ಣಾಗಿ ಮಾತ್ರ ನಿನ್ನನ್ನು ನಾನು ನೋಡಿದ್ದಲ್ಲ. ಭವ್ಯ ಮಾಯಾನಗರಿಯ ಗಗನಚುಂಬಿ ಅಪಾರ್ಟ್ ಮೆಂಟ್ ಗಳ ಮಾಳಿಗೆ ಮಾಳಿಗೆಯಲ್ಲೂ ಕಿಟಕಿಯೊಳಗೆ ಇಣುಕಿದ್ದೇನೆ. ಅಲ್ಲಿನ ಅಡುಗೆ ಮನೆಯಲ್ಲಿ ಕತ್ತಲೆಯಿಲ್ಲ. ದಿನದ ೨೪ ಗಂಟೆಯೂ ಕತ್ತಲೆ ಸೋಕದ ಮನೆಯಲ್ಲಿ ನೀನಿರುವುದನ್ನು ಕಂಡಿದ್ದೇನೆ. ಬೆಳದಿಂಗಳೆ ಸುಳಿದಾಡುವ ಆ ಮನೆಗಳ ನಾಲ್ಕಾರು ಕೋಣೆಗಳಲ್ಲಿ ಚದುರಿ ಹೋಗುವ ನಿನ್ನ ಬದುಕಿನಲಿ ಸಂತೋಷದ ಸೀಮೊಲ್ಲಂಘನವನ್ನು ಹುಡುಕಿದರೆ ನನಗೆ ಎಷ್ಟು ನಿರಾಸೆಯಾಗಿದೆ ಗೊತ್ತಾ? ಟಿವಿ ಸಿರಿಯಲ್ ಗಳ ಪಾತ್ರದಲ್ಲಿ ಲೀನವಾಗುತ್ತ ಆಗುತ್ತಾ ಸೋಫಾದ ಅಂಚನ್ನು ಹಿಡಿದುಕೊಂಡು ನೀನು ಮುಕ್ಕಳಿಸುವುವುದನ್ನು ನಾನು ನೋಡಿದ್ದೇನೆ.  ಆಳೆತ್ತರದ ಕನ್ನಡಿಯ ಮುಂದೆ ಪರ್ಪ್ಯೂಮ್ ಬಾಟಲಿ ಹಿಡಿದಾಗಲೂ ಪ್ರತಿಬಿಂಬದಲ್ಲೇ ದೃಷ್ಟಿನೆಟ್ಟು ಕಣ್ಣಲ್ಲಿ ನೀರಾಡಿದ್ದನ್ನು ನೋಡಿದ್ದೇನೆ.

ಹೋಗಲಿ ಬಿಡು, ಅಲ್ಲಿಂದ ಹೊರಬಂದು ಸಬಲೆ, ಸಶಕ್ತ ಹೆಣ್ಣನ್ನು ಕಂಡು ಖುಷಿ ಪಡೋಣವೆಂದು ಕಛೇರಿಗಳ ಕಂಪ್ಯೂಟರ್ ಗಳ ಸಾಲನ್ನೊಮ್ಮೆ ನೋಡಿದರೆ ಕೀಬೋರ್ಡ್ ಮೇಲೆ ವಾಯುವೇಗದಲ್ಲಿ ಓಡುವ ಕೈಬೆರಳುಗಳು ಕೂಡಾ ಒಮ್ಮೊಮ್ಮೆಲೇ ಅಲ್ಲೇ  ಸ್ತಬ್ದಗೊಳ್ಳುತ್ತವೆ. ನಿಧಾನವಾಗಿ ಕೆನ್ನೆಯ ಮೇಲೆ ಹರಿದಾಡುತ್ತಾ ಇಳಿಯುತ್ತಿರುವ ನೀರಿಗೆ ತಡೆಯೊಡ್ಡಲು ಪರದಾಡುತ್ತವೆ. ಆದರೆ ಆ ಕಣ್ಣೀರ ಧಾರೆಯಲ್ಲಿ ಯಾವುದೇ ಭೋರ್ಗರೆತ ಕಂಡಿಲ್ಲ. ಅಲ್ಲಿ ಬಿಕ್ಕಳಿಕೆಯಾಗಲಿ, ಮುಕ್ಕಳಿಕೆಯಾಗಲಿ ನನಗೆ ಕೇಲಿಸಿಲ್ಲ. ಅಲ್ಲಿ ಏನಿದ್ದರೂ ಮೌನ ರೋದನ, ಆಗೊಮ್ಮೆ ಈಗೊಮ್ಮೆ ಮುಖದ ಮೇಲೆ ಚಂದ್ರಗ್ರಹಣ...!

ಮಾಯಾನಗರಿಯ ಕೆಂಪುದೀಪದ ಅಡಿಯಲ್ಲಿ ವೇಶ್ಯೆ ಎಂಬ ಹೆಸರನ್ನಿಟ್ಟುಕೊಂಡು ದಣಿದು ಬಂದ ಮನಸುಗಳಿಗೆ ಸುಖದ ಸುದೆಯನ್ನು ಹರಸುತ್ತಾಳಂತೆ. ಹಾಗೆಂದು ಕೇಳಬಲ್ಲೆ ಆದರೆ ದೀಪದಡಿಯಲ್ಲಿ ಕತ್ತಲಿರುತ್ತದೆ ಎನ್ನುತ್ತಾರಲ್ಲಾ.. ಆ ಕತ್ತಲೆ ಕೆಂಪುದೀಪವನ್ನೂ ಸಹ ಬಿಟ್ಟಿಲ್ಲವಂತೆ. ನೀವೇ ಯೋಚಿಸಿ ಪುರುಷರೇ... ಹೆಣ್ಣಿಗೆ ವೇಶ್ಯೆ ಎಂಬ ಪಟ್ಟ ಹೇಗೆ ಬಂತು? ನಿಮ್ಮಂಥ ಗಂಡಸಿನಿಂದಲ್ಲವೇ...ದಿನಕ್ಕೆ ಹತ್ತಾರು ಮಂದಿಯೊಂದಿಗೆ ಮಗ್ಗಲು ಬದಲಾಯಿಸುವ ಆಕೆ, ಹಣದ ಹೊಳೆಯನ್ನೇ ಹರಿಸುವ ಕಾಮೀನ್ಮತ ತುಟಿಗೆ ಸಿಹಿ ತುಂಬುವುದಕ್ಕಾಗಿ ತನ್ನೆಲ್ಲೆ ಬಿಕ್ಕಳಿಕೆಯನ್ನು ಅದುಮಿಟ್ಟುಕೊಂಡು ನಗು ತಂದುಕೊಳ್ಳುತ್ತಾಳಂತೆ. ವರ್ಷವೊಂದಕ್ಕೆ ನೂರಾರು ಪುರುಷರ ಪುರುಷತ್ವ ಹೀರಿಕೊಂಡರೂ ಆಕೆಯಿನ್ನೂ ಪುರುಷಳಾಗಿಲ್ಲ. ಕೆಂಪುದೀಪದ ಗಲ್ಲಿಯ ಹಿಂಬಾಗದಲ್ಲಿ ನಿತ್ಯ ಕಣ್ಣೀರ ಕೋಡಿ ಹರಿಯುತ್ತದಂತೆ.

ಎಲ್ಲೆಲ್ಲಿ ನಿನ್ನ ನಗುವಿಗಾಗಿ ಹುಡುಕಲಿ ಹೆಣ್ಣೇ.. ಅಲ್ಲೆಲ್ಲ ನನಗೆ ನಿನ್ನ ನಗುವಿಗಿಂತ ಹಚ್ಚಾಗಿ ಕಣ್ಣೀರೇ ಕಾಣುತ್ತದೆ. ಗಂಡಿನ ಆಟ್ಟಹಾಸದ ದೌರ್ಜನ್ಯ ಎಂದು ಕೊನೆಗೊಳ್ಳುತದೆಯೋ ಅಂದು ಹೆಣ್ಣು ಸ್ವಲ್ಪ ನಗಬಹುದು ಅಲ್ಲವೇ ? ನಗುವ ಹಣ್ಣನ್ನು ನಂಬಬೇಡ.. ಅಳುವ ಗಂಡನ್ನು ನಂಬಬೇಡ ಅನ್ನುತ್ತಿದ್ದರು ಹಿರಿಯರು. ಇದರರ್ಥ ಏನು? ಪುರುಷ ಅಳಬಾರದು. ಹೆಣ್ಣು ಅಳುತ್ತಲೇ ಇರಬೇಕು ಎಂದೇ..?

ಹೆಣ್ಣಿನ ಅಳು ವ್ಯರ್ಥವಾಗಿಲ್ಲ ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಸೀತೆಯ ಕಣ್ಣಿರು ಸ್ವರ್ಣಲಂಕೆಯನ್ನೇ ನಾಶ ಮಾಡಿತು.. ದ್ರೌಪದಿಯ ಕಣ್ಣೀರು ಕೌರವ ಸಂತತಿಯನ್ನೇ ನಾಶಮಾದಿತು ಎಂದು ಹೇಳುತ್ತಾರೆ. ಇನ್ನು ಅಹಲ್ಯೆ. ಅಂತ ರೂಪವತಿಯಾದ ಆಹಲ್ಯೆಗೆ , ಚೈತನ್ಯದ ಚಿಲುಮೆಯಂತಹ ಇಂದ್ರ ಬೆಳಕಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆತನೂ ತನ್ನ ಕಾರ್ಯ ಸಾಧ್ಯಕ್ಕಾಗಿಯೇ ಬಂದಿದ್ದರೂ ಅವನಪ್ರೇಮ ಸುಳ್ಳಾಗಿದ್ದರೂ ಅವನ ನಡೆ ನುಡಿಯಲ್ಲಿ ಪ್ರೀತಿಯನ್ನ ತೋರಿಸಿದ, ಅವಳನ್ನು ಹೆಣ್ಣಾಗಿಸಿದ, ಮೆಚ್ದುಗೆಯ ಹೊನಲುಹರಿಸಿದ, ಅಹಲ್ಯೆ ಕರಗಿದಳು…………. ಅವಳ ಸ್ಥಾನದಲ್ಲಿ ಯಾವುದೇ ಸಾಮಾನ್ಯ ಹೆಣ್ಣಿದ್ದರೂ ಹೀಗೆ ಆಗುತ್ತಿತ್ತು…ನಮ್ ಸುತ್ತಾ ಮುತ್ತಾನೆ ಎಷ್ಟೊಂದು ಅಹಲ್ಯೆರಿದ್ದಾರೆ. ಕಲ್ಲಾಗಿ ಹೋಗಿದ್ದಾರೆ. ಆದರೆ ಅವರಿಗೆ ಜೀವ ಕೊಡಲು ರಾಮ ಬರಲೇ ಇಲ್ಲ, ರಾಮ ಬರುವುದೇ ಇಲ್ಲ. ಹಾಗಾಗಿ ಆ ಅಹಲ್ಯೆಯರ ಪ್ರತಿಮೆಗಳು ಸಜೀವಗೊಳ್ಳುತ್ತಲೆ ಇಲ್ಲ……………………. ಅವರೆಲ್ಲಾ ಶಾಪವಿಮೋಚನೆಯಾಗದ ಅಹಲ್ಯೆಯರೆನ್ನಬಹುದೇ ಇವೆಲ್ಲ ನಿಜವಿರಬಹುದು. ರಾವಣನನ್ನು ಕೊಂದು ರಾಮ ದೇವರಾದ. ಕೌರವರನ್ನು ಕೊಂದು ಪಾಂಡವರು ಮಹಾ ಧರ್ಮಿಷ್ಟರೆನಿಸಿಕೊಂಡರು. ಆದರೆ ಇದರಿಂದ ಸೀತೆಗಾಗಲಿ, ದ್ರೌಪದಿಗಾಗಲಿ ಏನು ಲಾಭವಾಯಿತು ಹೇಳು... ನೀನು ಕಣ್ಣೀರಿಟ್ಟು ನಿನ್ನ ಕಣ್ಣೀರನ್ನೇ ಏಣಿಯಾಗಿಸಿಕೊಂಡು ಮತ್ಯಾವನೋ ಪುರುಷೋತ್ತಮನಾಗಬೇಕೇ? ನಿನ್ನಲ್ಲಿ ಅಬಲತೆ ಎಂಬ ಕಣ್ಣೀರು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಸಾವಿರ ಸಾವಿರ ರಾವಣರೂ ಹುಟ್ಟುತ್ತಾರೆ. ಅಷ್ಟೇ ಸಂಖ್ಯೆಯ ರಾಮರೂ ಸೃಷ್ಟಿಯಾಗುತ್ತಾರೆ. ಅವರ ಜಂಘಾಬಲದ ಪರೀಕ್ಷೆಗೆ ನಿನ್ನ ಕಣ್ಣೀರು ಮಾಧ್ಯಮವಾಗುತ್ತಲೇ ಇರುತ್ತದೆ.

ಈ ದೇಶದಲ್ಲಿ …………………….. ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ ನಿಜ ಆದರೆ ಅವಳ ಭಾವನೆಗಳನ್ನು ಗೌರವಿಸುವುದಿಲ್ಲ, ಅನಿಸಿಕೆಗೆ ಬೆಲೆಯೂ ಇಲ್ಲ. ಓ ಹೆಣ್ಣೇ... ನಿನ್ನ ಕಣ್ಣೀರ ಕಟ್ಟೆಯ ಮೂಲ ಹುಡುಕಿ ನಾನು ಸೋತಿದ್ದೇನೆ. ಅದಿನ್ನೂ ನನಗೆ ಚಿದಂಬರ ರಹಸ್ಯ. ಈ ಸೋಲನ್ನು ಪ್ರಾಮಾಣಿಕವಾಗಿಯೇ ಒಪ್ಪಿಕೊಳ್ಳುತ್ತಾ ನಿನಗೊಂದು ಸಲಹೆ ನೀಡಲೇ? ತೊಡೆದು ಹಾಕು ಆ ಕಣ್ಣೀರ ಧಾರೆ.. ಒಡೆದು ಹಾಕು ಕಣ್ಣೀರ ಕಟ್ಟೆ. ಮತ್ತೆಂದೂ ಅದು ತುಂಬಿಕೊಳ್ಳದಿರಲಿ. ಸ್ವಾಭಿಮಾನಿ ಸೂರ್ಯರಶ್ಮಿಗೆ ಜಲಕಟ್ಟೆ ಬತ್ತಿಹೋಗಲಿ. ಆವಿಯಾಗಿ ಹೋಗಲಿ. 

Saturday, March 31, 2012

♥♥♥ ಬಯಸಿದ್ದೆಲ್ಲ ಸಿಗದು ಬಾಳಲಿ ♥♥♥

ಆತ್ಮೀಯರೇ,
ಬರಹ ಬದುಕನ್ನು ತೋರುವುದಿಲ್ಲ, ಬದುಕಲ್ಲಿ ನಡೆಯುವುದೆಲ್ಲಾ ಬರಹಕ್ಕೆ ಇಳಿಸಲಾಗುವುದಿಲ್ಲ . ಇಲ್ಲಿ ನಾನು ಬರೆಯುವ ಪ್ರತಿ ಕವನದ ಹಿಂದೆ ಒಂದೊಂದು ಮುದ್ದು ಹುಡುಗಿಯರ ನೋವಿನ ಕಥೆಗಳಿವೆ. ಹೃದಯ ತೋರಿಸಿ ಬದುಕನಳಿಸಿದ ಹುಡುಗರ ಅಟ್ಟಹಾಸವಿದೆ.ಯಾವುದೋ ಕಥೆ ಯಾವುದೋ ವ್ಯಥೆ ಇದೆ. ಆಗ ತಾನೆ ಪ್ರೀತಿಗೆ ಬಿದ್ದ ಹುಡುಗಿಯ ತುಂಟ ವಿಸ್ಮಯವಿದೆ. ಹುಡುಗನ ಸೆಳೆಯುವ ಆಸೆ ಇದೆ. ನಿದಿರೆಯ ಕನವರಿಕೆ ಇದೆ. ಯಾವುದೋ ಒಂದು ಹುಡುಗಿಯ/ಹೆಣ್ಣಿನ ಬದುಕಿನ ಬರಹವಲ್ಲ ಇದು. ಪ್ರತಿ ಹೆಣ್ಣಿನ ಜೀವನದಲ್ಲಿ ಒಂದಲ್ಲ ಒಂದು ಸಾರಿ ಬಂದು ಹೋಗುವ ಭಾವಗಳಿಗೆ ಬಣ್ಣ ಬೆರೆಸಿ ಇಲ್ಲಿ ಮೆರೆಸುತ್ತೇನಷ್ಟೆ.