ಉತ್ಪ್ರೇಕ್ಷೇಯನ್ನದಿರು ಹೆಣ್ಣೇ.. ರಾತ್ರಿ ಹಗಲು ಜಾಗರಣೆ ಕೂತು ಭೂತಗನ್ನಡಿ ಹಿಡಿದು ನಿನ್ನ ಕಣ್ಣಾಲಿಗಳ ಆಳಕ್ಕೆ ಇಣುಕಿದ್ದೇನೆ. ಇಣುಕುತ್ತಿದ್ದೇನೆ.. ಇಣುಕುತ್ತಲೇ ಇದ್ದೇನೆ. ಇಂದು ನಿನ್ನೆಯಿಂದಲ್ಲ, ಯುಗ ಯುಗಾಂತರಗಳಿಂದ ಆದರೆ ಇವತ್ತು ಈ ಕ್ಷಣದವರೆಗೂ ಆ ಕಣ್ಣಾಲಿಗಳ ಒಳಗಿನ ಜಲಾಶಯ ಒಮ್ಮೆಯೂ ಕೂಡ ಬತ್ತಿ ಹೋಗಿದ್ದನ್ನು ನಾನು ಕಂಡೇ ಇಲ್ಲ.
ಎಲ್ಲೋ ಒಂದು ಕಡೆ ಓದಿದ ನೆನಪು. " ಗಂಡು- ಹೆಣ್ಣುಗಳಿಬ್ಬರನ್ನು ಸೃಷ್ಟಿಸಿದ ಭಗವಂತ ಎಲ್ಲ ಶಕ್ತಿಯನ್ನು ಪುರುಷನಿಗೆ ಕೊಟ್ಟುಬಿಟ್ಟನಂತೆ. ಆತನಿಗೆ ಸಮಸ್ಯೆಯನ್ನೂ ಕೊಟ್ಟ. ಪರಿಹರಿಸಿಕೊಳ್ಳುವ ಶಕ್ತಿಯನ್ನೂ ಕೊಟ್ಟನಂತೆ, ಆದರೆ ಹೆಣ್ಣಿಗಾದರೋ ಸಮಸ್ಯೆಯ ಗುಡ್ಡೆಯನ್ನೆ ಹೊರಿಸಿಬಿಟ್ಟ ಇದಾದ ಮೇಲೆ ಆ ಭಗವಂತನಿಗೆ ಎಲ್ಲೋ ಒಂದು ಕಡೆ ಪಶ್ಚಾತಾಪವಾಗಿರಬೇಕು. ನಾನು ಹೀಗೆ ಮಾಡಿದರೆ ಸ್ತ್ರೀಲೋಕ ನನ್ನನ್ನು ದೇವರೆಂದು ಕರೆಯಲಾರದು ಎಂಬ ಭೀತಿ ಕಾಡಿತಂತೆ. ಅದರ ಫಲವಾಗಿಯೇ ಎರಡು ಕಣ್ಣೀರ ಚಿಲುಮೆಗಳನ್ನು ಆಕೆಯ ಅಕ್ಷಿ ಪಟಲದಲ್ಲಿ ಸಿಕ್ಕಿಸಿಬಿಟ್ಟನಂತೆ. ಸಮಸ್ಯೆ ಬಂದಾಗಲ್ಲಾ ಅತ್ತು ಹಗುರಾಗಿ ಬಿಡು ಎಂದು ಹರಸಿಬಿಟ್ಟನಂತೆ"... ಇದು ನಿಜಾನಾ ಹೆಣ್ಣೇ?
ಹಳ್ಳಿ ಹಳ್ಳಿಯ, ಕೇರಿ ಕೇರಿಯ, ಓಣಿ ಓಣಿಯ, ಮನೆಮನೆಯ ಗೋಡೆಗಳಲ್ಲಿ ಕಿವಿಕೊಟ್ಟು ಆಲಿಸಿದ್ದೇನೆ ಹೆಣ್ಣೇ.. ಅವರೆಲ್ಲ ನನ್ನಂತೆಯೇ ಎಂದು, ನನ್ನಷ್ಟೇ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದಾರೆಯೇ ಎಂದು ಆಗ ನಾನು ಅಲ್ಲಿನ ಆ ಒಳಮನೆಯ ಕಾರ್ಗತ್ತಲ ಅಡುಗೆಮನೆಯ ಒಲೆಯ ಬೆಂಕಿಯ ಮುಂದೆ ನಿನ್ನ ಬಿಕ್ಕಳಿಕೆಯನ್ನು ಕೇಳಿದ್ದೇನೆ. ಬಿಸಿಯ ಝಳಕ್ಕೆ ಸಿಕ್ಕಿ ಕರಗಿ ಹೋಗುವ ಹಿಮ ಪರ್ವತದಂತೆ ನಿನ್ನ ಕಣ್ಣಲಿಗಳಿಂದ ಜಲಧಾರೆಯಾಗಿ ಹರಿದು ಹೋದ ಪ್ರವಾಹದ ಬೆನ್ನುಹತ್ತಿ ಹೋಗಿದ್ದೇನೆ. ಆದರೆ ಅದು ಸಾಗರ ಸೇರಿದ್ದನ್ನು ಮಾತ್ರ ನಾನು ಕಂಡಿಲ್ಲ. ಅಲ್ಲಲ್ಲೆ ಹಸಿರು ಮಣ್ಣಲ್ಲಿ ಅದು ಇಂಗಿ ಹೋಗಿದೆಯಂತೆ. ಅಂತೆಯೇ ಆ ಪ್ರಶಾಂತ ಹಳ್ಳಿಗಳ ಮಣ್ಣಿನ ಕಣಕಣದಲ್ಲೂ ನನಗೆ ನಿನ್ನ ಕಣ್ಣೀರಿನ ಆರ್ದ್ರತೆಯೇ ಕಾಣುತ್ತದೆ ಕಣೇ.. ಹೋಗಲಿ ಬಿಡು ಆ ಅಡುಗೆ ಮನೆಯ ಹೊಸಿಲು ದಾಟಿ ಹೊರ ಬರುತ್ತಲೇ ನೀನು ಪ್ರಸನ್ನವದೆನೆಯಾಗಿ ಬಿಡುತ್ತಿಯಲ್ಲಾ. ಅದೇ ನನಗೆ ಆಶ್ಚರ್ಯ. ಆಗಲೇ ನಾನು ನಿರ್ಧರಿಸಿದ್ದು ಅಡುಗೆ ಮನೆ ಬರೀ ಅನ್ನದ ಕಾರಖಾನೆ ಮಾತ್ರವಲ್ಲ.. ಅದು ಹೆಣ್ಣಿನೆ ಕಣ್ಣೀರಿನ ಕಾರಖಾನೆಯೂ ಹೌದು ಎಂದು!
ಹಳ್ಳಿಯ ಹೆಣ್ಣಾಗಿ ಮಾತ್ರ ನಿನ್ನನ್ನು ನಾನು ನೋಡಿದ್ದಲ್ಲ. ಭವ್ಯ ಮಾಯಾನಗರಿಯ ಗಗನಚುಂಬಿ ಅಪಾರ್ಟ್ ಮೆಂಟ್ ಗಳ ಮಾಳಿಗೆ ಮಾಳಿಗೆಯಲ್ಲೂ ಕಿಟಕಿಯೊಳಗೆ ಇಣುಕಿದ್ದೇನೆ. ಅಲ್ಲಿನ ಅಡುಗೆ ಮನೆಯಲ್ಲಿ ಕತ್ತಲೆಯಿಲ್ಲ. ದಿನದ ೨೪ ಗಂಟೆಯೂ ಕತ್ತಲೆ ಸೋಕದ ಮನೆಯಲ್ಲಿ ನೀನಿರುವುದನ್ನು ಕಂಡಿದ್ದೇನೆ. ಬೆಳದಿಂಗಳೆ ಸುಳಿದಾಡುವ ಆ ಮನೆಗಳ ನಾಲ್ಕಾರು ಕೋಣೆಗಳಲ್ಲಿ ಚದುರಿ ಹೋಗುವ ನಿನ್ನ ಬದುಕಿನಲಿ ಸಂತೋಷದ ಸೀಮೊಲ್ಲಂಘನವನ್ನು ಹುಡುಕಿದರೆ ನನಗೆ ಎಷ್ಟು ನಿರಾಸೆಯಾಗಿದೆ ಗೊತ್ತಾ? ಟಿವಿ ಸಿರಿಯಲ್ ಗಳ ಪಾತ್ರದಲ್ಲಿ ಲೀನವಾಗುತ್ತ ಆಗುತ್ತಾ ಸೋಫಾದ ಅಂಚನ್ನು ಹಿಡಿದುಕೊಂಡು ನೀನು ಮುಕ್ಕಳಿಸುವುವುದನ್ನು ನಾನು ನೋಡಿದ್ದೇನೆ. ಆಳೆತ್ತರದ ಕನ್ನಡಿಯ ಮುಂದೆ ಪರ್ಪ್ಯೂಮ್ ಬಾಟಲಿ ಹಿಡಿದಾಗಲೂ ಪ್ರತಿಬಿಂಬದಲ್ಲೇ ದೃಷ್ಟಿನೆಟ್ಟು ಕಣ್ಣಲ್ಲಿ ನೀರಾಡಿದ್ದನ್ನು ನೋಡಿದ್ದೇನೆ.
ಹೋಗಲಿ ಬಿಡು, ಅಲ್ಲಿಂದ ಹೊರಬಂದು ಸಬಲೆ, ಸಶಕ್ತ ಹೆಣ್ಣನ್ನು ಕಂಡು ಖುಷಿ ಪಡೋಣವೆಂದು ಕಛೇರಿಗಳ ಕಂಪ್ಯೂಟರ್ ಗಳ ಸಾಲನ್ನೊಮ್ಮೆ ನೋಡಿದರೆ ಕೀಬೋರ್ಡ್ ಮೇಲೆ ವಾಯುವೇಗದಲ್ಲಿ ಓಡುವ ಕೈಬೆರಳುಗಳು ಕೂಡಾ ಒಮ್ಮೊಮ್ಮೆಲೇ ಅಲ್ಲೇ ಸ್ತಬ್ದಗೊಳ್ಳುತ್ತವೆ. ನಿಧಾನವಾಗಿ ಕೆನ್ನೆಯ ಮೇಲೆ ಹರಿದಾಡುತ್ತಾ ಇಳಿಯುತ್ತಿರುವ ನೀರಿಗೆ ತಡೆಯೊಡ್ಡಲು ಪರದಾಡುತ್ತವೆ. ಆದರೆ ಆ ಕಣ್ಣೀರ ಧಾರೆಯಲ್ಲಿ ಯಾವುದೇ ಭೋರ್ಗರೆತ ಕಂಡಿಲ್ಲ. ಅಲ್ಲಿ ಬಿಕ್ಕಳಿಕೆಯಾಗಲಿ, ಮುಕ್ಕಳಿಕೆಯಾಗಲಿ ನನಗೆ ಕೇಲಿಸಿಲ್ಲ. ಅಲ್ಲಿ ಏನಿದ್ದರೂ ಮೌನ ರೋದನ, ಆಗೊಮ್ಮೆ ಈಗೊಮ್ಮೆ ಮುಖದ ಮೇಲೆ ಚಂದ್ರಗ್ರಹಣ...!
ಮಾಯಾನಗರಿಯ ಕೆಂಪುದೀಪದ ಅಡಿಯಲ್ಲಿ ವೇಶ್ಯೆ ಎಂಬ ಹೆಸರನ್ನಿಟ್ಟುಕೊಂಡು ದಣಿದು ಬಂದ ಮನಸುಗಳಿಗೆ ಸುಖದ ಸುದೆಯನ್ನು ಹರಸುತ್ತಾಳಂತೆ. ಹಾಗೆಂದು ಕೇಳಬಲ್ಲೆ ಆದರೆ ದೀಪದಡಿಯಲ್ಲಿ ಕತ್ತಲಿರುತ್ತದೆ ಎನ್ನುತ್ತಾರಲ್ಲಾ.. ಆ ಕತ್ತಲೆ ಕೆಂಪುದೀಪವನ್ನೂ ಸಹ ಬಿಟ್ಟಿಲ್ಲವಂತೆ. ನೀವೇ ಯೋಚಿಸಿ ಪುರುಷರೇ... ಹೆಣ್ಣಿಗೆ ವೇಶ್ಯೆ ಎಂಬ ಪಟ್ಟ ಹೇಗೆ ಬಂತು? ನಿಮ್ಮಂಥ ಗಂಡಸಿನಿಂದಲ್ಲವೇ...ದಿನಕ್ಕೆ ಹತ್ತಾರು ಮಂದಿಯೊಂದಿಗೆ ಮಗ್ಗಲು ಬದಲಾಯಿಸುವ ಆಕೆ, ಹಣದ ಹೊಳೆಯನ್ನೇ ಹರಿಸುವ ಕಾಮೀನ್ಮತ ತುಟಿಗೆ ಸಿಹಿ ತುಂಬುವುದಕ್ಕಾಗಿ ತನ್ನೆಲ್ಲೆ ಬಿಕ್ಕಳಿಕೆಯನ್ನು ಅದುಮಿಟ್ಟುಕೊಂಡು ನಗು ತಂದುಕೊಳ್ಳುತ್ತಾಳಂತೆ. ವರ್ಷವೊಂದಕ್ಕೆ ನೂರಾರು ಪುರುಷರ ಪುರುಷತ್ವ ಹೀರಿಕೊಂಡರೂ ಆಕೆಯಿನ್ನೂ ಪುರುಷಳಾಗಿಲ್ಲ. ಕೆಂಪುದೀಪದ ಗಲ್ಲಿಯ ಹಿಂಬಾಗದಲ್ಲಿ ನಿತ್ಯ ಕಣ್ಣೀರ ಕೋಡಿ ಹರಿಯುತ್ತದಂತೆ.
ಎಲ್ಲೆಲ್ಲಿ ನಿನ್ನ ನಗುವಿಗಾಗಿ ಹುಡುಕಲಿ ಹೆಣ್ಣೇ.. ಅಲ್ಲೆಲ್ಲ ನನಗೆ ನಿನ್ನ ನಗುವಿಗಿಂತ ಹಚ್ಚಾಗಿ ಕಣ್ಣೀರೇ ಕಾಣುತ್ತದೆ. ಗಂಡಿನ ಆಟ್ಟಹಾಸದ ದೌರ್ಜನ್ಯ ಎಂದು ಕೊನೆಗೊಳ್ಳುತದೆಯೋ ಅಂದು ಹೆಣ್ಣು ಸ್ವಲ್ಪ ನಗಬಹುದು ಅಲ್ಲವೇ ? ನಗುವ ಹಣ್ಣನ್ನು ನಂಬಬೇಡ.. ಅಳುವ ಗಂಡನ್ನು ನಂಬಬೇಡ ಅನ್ನುತ್ತಿದ್ದರು ಹಿರಿಯರು. ಇದರರ್ಥ ಏನು? ಪುರುಷ ಅಳಬಾರದು. ಹೆಣ್ಣು ಅಳುತ್ತಲೇ ಇರಬೇಕು ಎಂದೇ..?
ಹೆಣ್ಣಿನ ಅಳು ವ್ಯರ್ಥವಾಗಿಲ್ಲ ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಸೀತೆಯ ಕಣ್ಣಿರು ಸ್ವರ್ಣಲಂಕೆಯನ್ನೇ ನಾಶ ಮಾಡಿತು.. ದ್ರೌಪದಿಯ ಕಣ್ಣೀರು ಕೌರವ ಸಂತತಿಯನ್ನೇ ನಾಶಮಾದಿತು ಎಂದು ಹೇಳುತ್ತಾರೆ. ಇನ್ನು ಅಹಲ್ಯೆ. ಅಂತ ರೂಪವತಿಯಾದ ಆಹಲ್ಯೆಗೆ , ಚೈತನ್ಯದ ಚಿಲುಮೆಯಂತಹ ಇಂದ್ರ ಬೆಳಕಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆತನೂ ತನ್ನ ಕಾರ್ಯ ಸಾಧ್ಯಕ್ಕಾಗಿಯೇ ಬಂದಿದ್ದರೂ ಅವನಪ್ರೇಮ ಸುಳ್ಳಾಗಿದ್ದರೂ ಅವನ ನಡೆ ನುಡಿಯಲ್ಲಿ ಪ್ರೀತಿಯನ್ನ ತೋರಿಸಿದ, ಅವಳನ್ನು ಹೆಣ್ಣಾಗಿಸಿದ, ಮೆಚ್ದುಗೆಯ ಹೊನಲುಹರಿಸಿದ, ಅಹಲ್ಯೆ ಕರಗಿದಳು…………. ಅವಳ ಸ್ಥಾನದಲ್ಲಿ ಯಾವುದೇ ಸಾಮಾನ್ಯ ಹೆಣ್ಣಿದ್ದರೂ ಹೀಗೆ ಆಗುತ್ತಿತ್ತು…ನಮ್ ಸುತ್ತಾ ಮುತ್ತಾನೆ ಎಷ್ಟೊಂದು ಅಹಲ್ಯೆರಿದ್ದಾರೆ. ಕಲ್ಲಾಗಿ ಹೋಗಿದ್ದಾರೆ. ಆದರೆ ಅವರಿಗೆ ಜೀವ ಕೊಡಲು ರಾಮ ಬರಲೇ ಇಲ್ಲ, ರಾಮ ಬರುವುದೇ ಇಲ್ಲ. ಹಾಗಾಗಿ ಆ ಅಹಲ್ಯೆಯರ ಪ್ರತಿಮೆಗಳು ಸಜೀವಗೊಳ್ಳುತ್ತಲೆ ಇಲ್ಲ……………………. ಅವರೆಲ್ಲಾ ಶಾಪವಿಮೋಚನೆಯಾಗದ ಅಹಲ್ಯೆಯರೆನ್ನಬಹುದೇ ಇವೆಲ್ಲ ನಿಜವಿರಬಹುದು. ರಾವಣನನ್ನು ಕೊಂದು ರಾಮ ದೇವರಾದ. ಕೌರವರನ್ನು ಕೊಂದು ಪಾಂಡವರು ಮಹಾ ಧರ್ಮಿಷ್ಟರೆನಿಸಿಕೊಂಡರು. ಆದರೆ ಇದರಿಂದ ಸೀತೆಗಾಗಲಿ, ದ್ರೌಪದಿಗಾಗಲಿ ಏನು ಲಾಭವಾಯಿತು ಹೇಳು... ನೀನು ಕಣ್ಣೀರಿಟ್ಟು ನಿನ್ನ ಕಣ್ಣೀರನ್ನೇ ಏಣಿಯಾಗಿಸಿಕೊಂಡು ಮತ್ಯಾವನೋ ಪುರುಷೋತ್ತಮನಾಗಬೇಕೇ? ನಿನ್ನಲ್ಲಿ ಅಬಲತೆ ಎಂಬ ಕಣ್ಣೀರು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಸಾವಿರ ಸಾವಿರ ರಾವಣರೂ ಹುಟ್ಟುತ್ತಾರೆ. ಅಷ್ಟೇ ಸಂಖ್ಯೆಯ ರಾಮರೂ ಸೃಷ್ಟಿಯಾಗುತ್ತಾರೆ. ಅವರ ಜಂಘಾಬಲದ ಪರೀಕ್ಷೆಗೆ ನಿನ್ನ ಕಣ್ಣೀರು ಮಾಧ್ಯಮವಾಗುತ್ತಲೇ ಇರುತ್ತದೆ.
ಈ ದೇಶದಲ್ಲಿ …………………….. ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ ನಿಜ ಆದರೆ ಅವಳ ಭಾವನೆಗಳನ್ನು ಗೌರವಿಸುವುದಿಲ್ಲ, ಅನಿಸಿಕೆಗೆ ಬೆಲೆಯೂ ಇಲ್ಲ. ಓ ಹೆಣ್ಣೇ... ನಿನ್ನ ಕಣ್ಣೀರ ಕಟ್ಟೆಯ ಮೂಲ ಹುಡುಕಿ ನಾನು ಸೋತಿದ್ದೇನೆ. ಅದಿನ್ನೂ ನನಗೆ ಚಿದಂಬರ ರಹಸ್ಯ. ಈ ಸೋಲನ್ನು ಪ್ರಾಮಾಣಿಕವಾಗಿಯೇ ಒಪ್ಪಿಕೊಳ್ಳುತ್ತಾ ನಿನಗೊಂದು ಸಲಹೆ ನೀಡಲೇ? ತೊಡೆದು ಹಾಕು ಆ ಕಣ್ಣೀರ ಧಾರೆ.. ಒಡೆದು ಹಾಕು ಕಣ್ಣೀರ ಕಟ್ಟೆ. ಮತ್ತೆಂದೂ ಅದು ತುಂಬಿಕೊಳ್ಳದಿರಲಿ. ಸ್ವಾಭಿಮಾನಿ ಸೂರ್ಯರಶ್ಮಿಗೆ ಜಲಕಟ್ಟೆ ಬತ್ತಿಹೋಗಲಿ. ಆವಿಯಾಗಿ ಹೋಗಲಿ.
ಎಂತಹ ಚೈತನ್ಯ ತುಂಬಿರುವ ಲೇಖನ ಡಿಯರ್....
ReplyDeleteಎಲ್ಲೊ ತೀರ ಸೋತು ಹೋದೆನೆಂದು ಅಡಿಸೇರಲಿರುವ ಹೆಣ್ಣೋಮ್ಮೆ ಇದನ್ನು ಓದಿದರೆ ಖಂಡಿತ ಬದಲಾಗುತ್ತಾಳೆ... ಕಣ್ಣೀರು ಸ್ತ್ರೀ ಕುಲಕ್ಕೆ ಅಂಟಿರೋ ಶಾಪ ಎಂದು ಶಾಪಿಸುತ್ತಲಾದರೂ ಮೇಲೆಳುತ್ತಾಳೆ...
ನಿಜಕ್ಕೂ ಉತ್ತಮ ಬರಹ... ನಡುನಡುವೆ ಬರುವ ಪೌರಾಣಿಕ ಹಿನ್ನಲೆಗಳು ಲೇಖನದ ತೂಕ ಹೆಚ್ಚಿಸಿವೆ.....
I liked alot...
ಧನ್ಯವಾದಗಳು ಸರ್... ನಿಮ್ಮ ಪ್ರೋತ್ಸಾಹ ಮತ್ತು ಹೆಣ್ಣಿನ ಬಾಳಲ್ಲಿ ನಡೆಯುವ ಕೆಲವು ಘಟನೆಗಳು ಈ ಲೇಖನ ಸಿದ್ದವಾಗಲು ಕಾರಣವಾಗಿದೆ. ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು
Deleteಲೇಖನ ತುಂಬಾ ಚೆನ್ನಾಗಿದೆ. ಇದನ್ನು ಯಾವುದಾದರೂ ಪತ್ರಿಕೆಗೆ ಕಳಿಸಬಹುದಿತ್ತು.
ReplyDeleteಪತ್ರಿಕೆಗೆ ಕಳಿಸುವಷ್ಟು ಭಾವಪೂರ್ಣವಾಗಿ ಮೂಡಿಬಂದಿದೆಯೇ? ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.
Deleteಕಂಡಿತಾ ಪತ್ರಿಕಾ ಪ್ರಕಟಣೆಗೆ ಯೋಗ್ಯವಾಗಿದೆ. ಮುಂದಿನ ಬಾರಿ ಇಂತಹ ಲೇಖನಗಳನ್ನು ಬರೆದಾಗ ಒಮ್ಮೆ ಕಳುಹಿಸಿ ನೋಡಿ.
ReplyDeleteಆತ್ಮೀಯ ಲಲಿತಾ ಅವರೇ,
Deleteನಿಮ್ಮ ಬ್ಲಾಗ್‌ನಲ್ಲಿನ ಲೇಖನವನ್ನು ನಮ್ಮದೊಂದು ಹೊಸ ಮಾಸಪತ್ರಿಕೆಗೆ ಬಳಸಿಕೊಳ್ಳಬಹುದೇ ? ನಿಮ್ಮ ಅನುಮತಿ ದೊರೆತರೆ ಬಳಸಿಕೊಳ್ಳುತ್ತೇನೆ.
ಸಂಭಾವನೆ ನಿರೀಕ್ಷಿಸಬೇಡಿ. :)
- ಶ್ರೀಪತಿ ಮ. ಗೋಗಡಿಗೆ
ಪ್ರತ್ಯುತ್ತರ:
ಧನ್ಯವಾದಗಳು. ಯಾವ ಲೇಖನ ಎಂಬುದನ್ನು ತಿಳಿದುಕೊಳ್ಳಬಹುದೇ? ನನ್ನ ಲೇಖನ ನಿಮ್ಮ ಮಾಸ ಪತ್ರಿಕೆಯಲ್ಲಿ ಪ್ರಕಟವಾಗುವುದರಲ್ಲಿ ನನ್ನ ಅಭ್ಯಂತರವೇನೂ ಇಲ್ಲ. ಯಾವುದೇ ಸಂಭಾವನೆಯ ಅವಶ್ಯಕತೆಯೂ ನನಗಿಲ್ಲ ಯಾಕೆಂದರೆ ಇಲ್ಲಿ ನಾನು ಬರೆದಿದ್ದು ಮೇಲೆ ಹೇಳಿದಂತೆ ಮನಸಿಗೆ ತೋಚಿದ್ದು.... ನೆನಪುಗಳು ಹಾಗೆ ಹಾಳೆಯಲ್ಲಿ ಅಕ್ಷರವಾಗಿದೆಯಷ್ಟೇ.
ಲಲಿತಾ ಅವರೆ, ಈ ಬಾರಿ ಈ ಲೇಖನವನ್ನೇ ತೆಗೆದುಕೊಂಡಿದ್ದೇನೆ.
Delete