Wednesday, August 1, 2012

♥♥ ನಿನ್ನ ಪ್ರೀತಿಯನ್ನು ಮತ್ತೆ ಕರುಣಿಸಿದ ಆ ದೇವರಿಗೆ ಕೋಟಿ ನಮನ ♥♥

ನಾನು ಸಾಮಾನ್ಯವಾಗಿ ಮಧ್ಯಾಹ್ನಗಳಲ್ಲಿ ಹೀಗೆ ಬರೆಯಲು ಕೂರುವುದಿಲ್ಲ. ಮಧ್ಯಾಹ್ನಗಳೇನಿದ್ದರೂ ಕೆಲಸಕ್ಕೆ ಮೀಸಲು. ಸಂಜೆ ಮಾತ್ರ ತುಂಬ ಪಕೀರ ಪ್ರೀತಿಗೆ ಮೀಸಲು ನಿನ್ನ ತೆಕ್ಕೆ, ನಿನ್ನ ಸೊಕ್ಕು, ನಿನ್ನ ಮುನಿಸು , ಅರ್ಧ ಮುಚ್ಚಿದ ಕಣ್ಣು, ನಿನ್ನ ಬಿಸಿಯಪ್ಪುಗೆ, ಕೊಟ್ಟ ಮುತ್ತು ಸಂಜೆಗಳೆಲ್ಲವೂ ಅದಕ್ಕೆ ಚೆಂದವಿತ್ತು.

ಜೀವನದಲ್ಲಿ ದೇವರು ಕೊಟ್ಟ  ಎರಡನೇ ಉಡುಗೊರೆ ನೀನು.. ದೇವರು ಕೊಟ್ಟ ಉಡುಗೊರೆ ಎಂದ ಮೇಲೆ  ಅದು ಎಷ್ಟು ಬೆಲೆಬಾಳುವಂತದ್ದು ಎಂದು ಹೇಳಲಸಾಧ್ಯ.ಅಷ್ಟು ಬೆಲೆಬಾಳುವ ನಿನ್ನನ್ನು ಕರುಣಿಸಿದ ದೇವರಿಗೆ ನನ್ನ ಕೋಟಿ ನಮನಗಳು.

ಇವತ್ತಿಗೆ ಆ ದೇವರು ಮತ್ತೆ ನನಗೆ ಕಳೆದುಕೊಂಡ ನಿನ್ನ ಪ್ರೀತಿಯನ್ನು ಕರುಣಿಸಿ ಎರಡು ವರ್ಷ ಪೂರ್ಣವಾಗಿದೆ.ಈ ಸಮಯದಲ್ಲಿ ದೇವರನ್ನು ಕೇಳೊದೊಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ. ನನ್ನ ಜೀವನದ ಕೊನೆವರೆಗೂ ಇವನ ಪ್ರೀತಿ ನನಗಿರಲಿ ಅನ್ನೊದೊಂದೇ.

ಸಿಗುವುದಾದರೆ ನಿನ್ನಂತ ಪ್ರಿಯತಮ ಸಿಗಬೇಕು. ಆಗ ಪ್ರೀತಿಸುವ ಹೃದಯಗಳಿಗೆ ಜಗತ್ತಿನಲ್ಲಿ ಬೆಲೆ ಇರುತ್ತದೆ.  ಎಂದೂ ಕೂಡ ನಿನ್ನ ಸಾಗರದಂಥ ಹೃದಯ ಶ್ರೀಮಂತಿಕೆಗೆ ಬೆಲೆಕಟ್ಟಲಾಗುವುದೇ. ಈಗಲೇ ನನ್ನ ಭವಿಷ್ಯದೆಡೆಗೆ ಚಿಂತಿಸುವ ನೀನು ಮುಂದೆ ಯಾವುದೇ ರೀತಿಯ ಕಲಹಗಳಿಗೆ ಎಡೆಮಾಡುವುದಿಲ್ಲವೆಂಬ ಪೂರ್ಣ  ನಂಬಿಕೆ ಮನಸ್ಸಿನಲ್ಲಿ ಬೇರೂರಿದೆ ಹಾಗಾಗಿ ನಿನ್ನ ಪ್ರೀತಿಯನ್ನು ಬಿಟ್ಟು ಹೋಗುವ ಮನಸ್ಸು ಬರುತಿಲ್ಲ. ಆಗಾಗ ನಮ್ಮ ಪ್ರಶಾಂತವಾದ ಪ್ರೀತಿ ಸಾಗರದಲ್ಲಿ ನಾನೇ ಜೋರು ಅಲೆಗಳನ್ನೆಬ್ಬಿಸಿದರೂ ನೀನು ಮಾತ್ರ ಮೊದಲು ರೇಗಿದರೂ ಮತ್ತೇ ಏನೂ ಆಗಿಲ್ಲವೆಂಬಂತೆ ಅದೇ ಸಾಗರದಲ್ಲಿ ನಮ್ಮ ಪ್ರೀತಿ ಪಯಣವನ್ನು ಶಾಂತವಾಗಿ ನೆಡೆಸುತ್ತೀಯ.  ನನ್ನದೆಷ್ಟು ತಪ್ಪುಗಳಿದ್ದರೂ  ಅವುಗಳೆಲ್ಲವನ್ನೂ ಒಟ್ಟಿಗೆ ಇನ್ನೂ ಪ್ರೀತಿ ಮೊಗೆ ಮೊಗೆದು ನೀಡುವ ನಿನ್ನ ಪ್ರೀತಿ ಪಡೆದ ನಾನೇ ಧನ್ಯ!. ಅಷ್ಟೊಂದು  ದೂರವಿದ್ದರೂ ಮನಸ್ಸಿನ ಕದತಟ್ಟಿ ಒಳಬಂದ ಅರಿವೇ ಇರಲಿಲ್ಲ ಇನಿಯಾ.

ಸಂಜೆ ಹರಡಿಕೊಂಡ ಆಗಸದಲ್ಲಿ ಮೊದಲ ಚುಕ್ಕಿ ಮಿನುಗುವುದರೊಳಗೆ ನಿನ್ನ ಗೂಡು ಕಟ್ಟಿ  ನಕ್ಷತ್ರದಡಿಯ ಅಂಗಳದಲ್ಲಿ ಅಂಗಾತ ಮಲಗಿಕೊಂಡು ಆಗ ಬರೆಯಬೇಕೆನಿಸುತ್ತದೆ ನಿನ್ನ ಹೆಸರು.

ಎಷ್ಟು ನೆನಪಾಗುತ್ತಿ ಗೊತ್ತಾ? ಆಳನಿದ್ದೆಯ ಮಗುವಿಗೆ ಯಾವುದೋ ಜನ್ಮದ ಪ್ರೀತಿ ನೆನಪಾದಂತೆ. ನೀನು ಮೊದಲಿನಿಂದಲೂ ಅಷ್ಟೇ. ನಿನಗಿಂತ ನಿನ್ನ ಹೆಸರು, ಮಾತು ಚೆಂದ ಅದಕ್ಕಿಂತ ನಿನ್ನ ನೆನಪು ಚೆಂದ, ಹಲವು ವರ್ಷಗಳ ಹಿಂದೆ ಸಂಜೆಯ ಹೊತ್ತಿನಲ್ಲಿ ಮನೆಯಂಗಳದಲ್ಲಿ ಕುಳಿತು ಏನೇನೋ ಹರಟುತ್ತ ಕುಳಿತಿದ್ದೇವಲ್ಲ? ಆಗ ಹೆಡೆಯುತಿತ್ತು ನೋಡು ಸಂಪಿಗೆಯ ಮಡಿಲಲ್ಲಿ ಆಸೆಗಳ ಮಿಡಿನಾಗರವೇ. ನೀನು ತುಂಬಾ ಕೆಣಕಿದಾಗ ಸುಮ್ಮನಿರಬೇಕೆನಿಸುತಿತ್ತು. ಎಲ್ಲೋ ಮೈ ಮರೆತು ಹಾಡುತ್ತಾ ಕುಳಿತಾಗ ಮೈ ತುಂಬ ಮಳೆಯಾಗಿ ಸುರಿಯಬೇಕೆನಿಸುತಿತ್ತು.

ಹೀಗೆಲ್ಲ ಯೋಚಿಸುವುದು ತೀರ ಹುಟ್ಟು ಅನಿಸಿಬಿಡುತ್ತದೇನೋ ನಿನಗೆ? ನಾನು ಉನ್ಮಾದಿ ಹುಡುಗಿ. ಪ್ರೀತಿಯ ಬಗ್ಗೆ ಮಾತನಾಡಿ ಆತ್ಮವಂಚನೆ ಮಾಡಿಕೊಳ್ಳುವುದು ನನಗಿಷ್ಟವಿಲ್ಲ. ರಕ್ತ ಮಾಂಸಗಳ ಮನುಷ್ಯ ದೇವರಂತೆ ಯಾವತ್ತು ಬದುಕಲಾರ. ಗಾಳಿಯಲ್ಲಿ ಕೊಟ್ಟ ಮುತ್ತು ಕೆನ್ನೆಗೆ ತಾಕಿ ಕರಗುವುದಿಲ್ಲ. ಹೇಳಿಕೊಳ್ಳದ ಮಾತು ಕನಸಾಗಿ ಕಣ್ತುಂಬ ಅರಳುವುದಿಲ್ಲ. ಮನಸ್ಸು ತುಂಬಾ ಭಾವನಾತ್ಮಕ ಆಗುವುದು ಕೂಡ ಮನಸ್ಸಿನ ಅಪ್ಪಣೆಯಿಂದಲೇ. ಮನಸ್ಸು ಒಪ್ಪದೇ ಹೋಗದಿದ್ದರೆ ನೀನು ಅಷ್ಟೊಂದು ದೂರವಿದ್ದರೂ ಸುಮ್ಮಸುಮ್ಮನೇ ಕಣ್ಣ ತುಂಬ ಬರುತ್ತಿರಲಿಲ್ಲ. ಸಮುದ್ರದ ಅಲೆ ಕಾಲಿಗೆ ಬಂದು ತಾಕಿದಾಗ ಎಲ್ಲೋ ದೂರದ ನಾವೆಯ ನೆತ್ತಿಯ ಮೇಲಿನ ದೀಪದಲ್ಲಿ ನಾನು ನಿನ್ನನ್ನು ಹುಡುಕುತ್ತಿರಲಿಲ್ಲ.

ಯಾವತ್ತು ಏನನ್ನೂ, ಯಾರನ್ನು ಇಷ್ಟು ಪ್ರೀತಿಸಿದವಳಲ್ಲ ನಾನು. ಎಲ್ಲರೂ ನನ್ನನ್ನು ಅದೃಷ್ಟವಂತೆ ಅಂತಾರೆ ಆದರೆ ನಾನು ಆ ಅದೃಷ್ಟವನ್ನು ನಿನ್ನಲ್ಲಿ ಹುಡುಕುತ್ತೇನೆ.

12 comments:

  1. ಲಲಿತಾ... ಅದ್ಯಾಕೆ ಹೊಟ್ಟೆ ಕಿಚ್ಚಗುವಷ್ಟು ಚಂದ ಬರಿತಿರಿ...? ಚಂದದ ಉಪಮೆಯಗಳನ್ನು ಅದೆಲ್ಲಿಂದ ಪೋಣಿಸುತ್ತಿರಿ?
    ನಿಮ್ಮ ಪ್ರೇಮ ಬರಹಗಳು ಸುಮಧುರ ನೆನಪುಗಳನ್ನು ಮೆಲುಕು ಹಾಕುತ್ತದೆ, ಆಸೆ, ನೀರಾಸೆಗಳ ಮಿಲನವಾಗಿಸುತ್ತದೆ... ದೇವರು ಕೊಟ್ಟ ಎರಡೆನೇ ಹುಡುಗ ನಿಮ್ಮ ಹುಡುಗನಾದರೆ...ಮೊದಲನೆಯದು ಯಾವುದು? ದೇವರು ಮತ್ತೇ ನಿಮ್ಮ ಜೀವವನ್ನ ನಿಮ್ಮ ಬಳಿಗೆ ಕಳಿಸಿದ್ದಾನೆ....ಜೋಪಾನ ಮಾಡಿ...
    ಸಿಕ್ಕಾಪಟ್ಟೆ ಇಷ್ಟ ಪಟ್ಟೇ....

    ReplyDelete
  2. ಧನ್ಯವಾದಗಳು ಸುಷ್ಮಾ........ಪ್ರೀತಿ ಮನಸ್ಸಿನಲ್ಲಿರುವಾಗ ಉಪಮೇಯ ಉಪಮಾನಗಳು ತಾನೇತಾನಾಗಿ ಹುಟ್ಟಿಕೊಳ್ಳುತ್ತದೆ...... ದೇವರು ಕೊಟ್ಟ ಎರಡನೇ ಉಡುಗೊರೆ ಎಂದರೆ.... ಎಲ್ಲರಿಗೂ ತಂದೆ ತಾಯಿಗಳು ದೇವರು ಕೊಟ್ಟ ಮೊದಲ ಉಡುಗೊರೆಯಂತೆ .... ಆ ಅರ್ಥದಲ್ಲಿ ಹೇಳಿದೆ... ದೇವರು ಕೊಟ್ಟ ಎರಡನೇ ಉಡುಗೊರೆ ಅವನು.....ಹಂ ಸುಷ್ಮಾ ನೀವು ಹೇಳಿದಂತೆ ತುಂಬಾ ಜೋಪಾನ ಮಾಡುತ್ತೇನೆ ಎಂದು ಕಳೆದುಹೋಗದ ಹಾಗೆ...

    ReplyDelete
  3. ಪ್ರೀತಿಗಾಗಿ, ಪ್ರೀತಿಯ ಬಗ್ಗೆ,ಪ್ರೀತಿಯಿಂದ ಪೋಣಿಸಿದ ಬರಹಗಳ ಒಂದು ಪ್ರೀತಿಯ ಸೌಧವನ್ನು ಬ್ಲಾಗ್ ಮೂಲಕ ಕಟ್ಟಿದ್ದೀರಿ.....ನೀವು ಇಷ್ಟೊಂದು ಪ್ರೀತಿಸುವ ನಿಮ್ಮ ಇನಿಯ ನಿಜವಾಗಿಯೂ ಅದೃಷ್ಟವಂತ...ನಿಮಗೆ ಶುಭವಾಗಲಿ....ನಿಮ್ಮ ಪ್ರೀತಿಗೆ ಜಯವಾಗಲಿ.....ಇನ್ನು ಉತ್ತಮ ಬರಹಗಳು ಮೂಡಿಬರಲಿ......ಧನ್ಯವಾದಗಳು......

    ReplyDelete
  4. ಧನ್ಯವಾದಗಳು ಅಶೋಕ್ ರವರೇ, ನಿಮ್ಮ ಆಶೀರ್ವಾದಕ್ಕೆ ಮತ್ತೊಮ್ಮೆ ಧನ್ಯವಾದಗಳು, ಹೀಗೆ ಇನ್ಹೆಚ್ಚು ಬರಹಗಳು ಮೂಡಿ ಬರುವಲು ನಿಮ್ಮೆಲ್ಲರ ಆರ್ಶೀವಾದವಿದ್ದರೆ ಸಾಧ್ಯ.

    ReplyDelete
  5. ಒಲುಮೆಯ ಭಾವವನು ಕಟ್ಟಿಕೊಟ್ಟ ರೀತಿಯೇ ಮನೋಜ್ಞವಾಗಿದೆ.

    ಸರಳ ಸುಂದರ ನಿರೂಪಣಾ ಶೈಲಿ

    ReplyDelete
  6. ಧನ್ಯವಾದಗಳು ಸರ್,ಒಲುಮೆಯ ಭಾವವನು ಕಟ್ಟಿಕೊಟ್ಟ ರೀತಿಯೆಂದರೆ ಪ್ರೀತಿಯ ಭಾವನೆಗಳು ಆದರೆ

    ಏನೆಲ್ಲಾ ಕನಸುಗಳು ಇರ್ತವೆ ಮನಸಲ್ಲಿ ಹೇಳಿ ಕೊಳ್ಳೋಕೆ ಆಗೋದಿಲ್ಲ
    ಏನೇನೋ ಆಸೆಗಳು ಇರ್ತವೆ ಅವೆಲ್ಲ ನನಸಾಗೋಲ್ಲ
    ಎಷ್ಟೆಲ್ಲಾ ನಂಬಿರ್ತೇವೆ ಅವರು ನಂಬಿಕೆನಾ ಉಳ್ಸಿ ಕೊಳ್ಳೋಲ್ಲ
    ಬದುಕೋಕೆ ಥರ ಥರ ಮುಖವಾಡ ಹಾಕೊಂಡು ಬದುಕ ಬೇಕಲ್ಲ
    ನೋವ ಮರೆಯೋಕೆ ನಗೋ ತರ ನಟನೆ
    ಸತ್ಯ ಹೇಳೋಕೆ ಆಗದೆ ಸುಳ್ಳಿನ ಕತೆ
    ಮೋಹ ತೀರಿಸಿ ಕೊಳ್ಳಕೆ ಪ್ರೀತಿಯ ಬಲೆ
    ಬದುಕು ಕಟ್ಟಿ ಕೊಳ್ಳೋಕೆ ನಂಬಿಕೆಯಾ ಬಣ್ಣ
    ಅಬ್ಬ ಎಷ್ಟೊಂದು ನಟನೆಯ ಸುಳ್ಳುಗಳ ಪ್ರಪಂಚ
    ನಾವು ಇಷ್ಟ ಪಟ್ಟಿರೋದು ಒಂದು ಬಿಟ್ಟು ಇನ್ನೆಲ್ಲ ಸಿಗುತ್ತೆ ಏನು ಮಾಡೋಕಾಗೊಲ್ಲ !

    ReplyDelete
  7. ತುಂಬಾ ಸುಂದರವಾಗಿ ಬರೆದಿದ್ದೀರ..ನಿಮ್ಮಂತಹ ಪ್ರೀತಿ ಮಾಡುವವರು ಸಿಕ್ಕರೆ ಬದುಕಿಗೊಂದು ಅರ್ಥ ಬರುವುದು..ಪ್ರೀತಿಯ ವರ್ಣನೆ ಅದ್ಭುತವಾಗಿ ಮೂಡಿ ಬಂದಿದೆ.

    ReplyDelete
  8. ಜಿ...ಪ್ರೀತಿ ಅಂದ್ರೆ ಏನು?...ದಯವಿಟ್ಟು ಯಾರದ್ರು ಹೇಳಿ...

    ReplyDelete
  9. ಜಿ...ಪ್ರೀತಿ ಅಂದ್ರೆ ಏನು?...ದಯವಿಟ್ಟು ಯಾರದ್ರು ಹೇಳಿ...

    ReplyDelete
  10. ನಿಮ್ಮ ಈ ಬರವಣಿಗೆ ಗೆ ಸೂಪರ್... loved ittt..

    ReplyDelete