Friday, October 14, 2011

♥♥♥ ನಿನ್ನಾಸರೆ ದೊರೆತರೆ ಬದುಕು ................. ದೊರಕದಿದ್ದರೆ ಸಾವು ♥♥♥



ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೀ… ಪ್ರೀತಿಗೆ ಸಾರಥಿ..

ದೇವರು ವರವನ್ನು ಕೊಟ್ಟು ಕಿತ್ಕೋತಾನ? ಗೊತ್ತಿಲ್ಲ.......ನಿನ್ನ ಮತ್ತೆ ನನಗೆ ಕರುಣಿಸಿ ಎಲ್ಲಾ ಕನಸನ್ನು ಕಟ್ಟಿಕೊಂಡ ಮೇಲೆ ಮತ್ತೆ ಕಿತ್ತ್ಕೊಳ್ತಾ ಇದ್ದಾನೆ.  ನನ್ನ ಬದುಕಿನ ಪ್ರತಿ ದಿನದ ಪ್ರತಿ ಕ್ಷಣಗಳಲ್ಲಿ ಕೂಡ ನಾನು ನಿನ್ನ ಕುರಿತಾಗಿ ಒಂದೊಂದು ಕನಸು ಕಟ್ಟುತ್ತಿದ್ದೆ. ಆದರೇ ಅದಷ್ಟೂ ಕನಸುಗಳಿಗೆ ಮಣ್ಣಿನ ಹೊದಿಕೆಯ ಹೊದ್ದಿಸಿ ಮಲಗಿಸಿಬಿಟ್ಟೆ ನೀನು. ನಿನ್ನ ಮೇಲಿನ ಮೊದಲ ಪ್ರೀತಿಯಿಂದಾನೆ ಕೇಳ್ತಾ ಇದ್ದೀನಿ ಜಗತ್ತಿನಲ್ಲಿರುವ ಎಲ್ಲಾ ನೋವುಗಳೂ ನನಗೊಬ್ಬಳಿಗೆ ಯಾಕೆ ? ಬದುಕಿನ ಕಡೆಯ ಕ್ಷಣಗಳವರೆಗೂ ನಾನು ಇನ್ನೊಬ್ಬನಿಗೆ ಗೊಂಬೆಯಾಗಿ ನೋವಿನ ಅರಮನೆಯ ರಾಜಕುಮಾರಿಯಾಗಿಯೇ ಇರಬೇಕಾ?

ಬದುಕು ಅಂದ್ರೆ ಏನು ? ನಾನು ತಿಳಿದಿದ್ದಿಷ್ಟೇ... ನೀನು ಸುಸ್ತಾಗಿ ಬಂದಾಗಿ ಮಡಿಲಲ್ಲಿ ಮಲಗಿಸಿಕೊಳ್ಳುವುದು.... ಯಾವತ್ತು ಮಡಿಲ ಮಗುವಾಗಿ ನೋಡಿಕೋಳ್ಳುವುದು. ನೀನು ದುಃಖಗೊಂಡಾಗ ಎರಡು ಕಣ್ಣ ಹನಿಗಳನ್ನ ಒರೆಸುವುದು. ಸಾಧ್ಯವಾದರೆ ಯಾವತ್ತು ನಿನ್ನ ಕಂಗಳಿಂದ ಹನಿಗಳು ಜಾರದಿರುವಂತೆ ನೋಡಿಕೊಳ್ಳುವುದು, ನೀನು ಪ್ರೀತಿಯಿಂದ ತಂದಿರುವ ಒಂದೆರೆಡು ಮೊಳ ಮಲ್ಲಿಗೆಯನ್ನ ನಿನ್ನ ಕೈಯಿಂದಲೇ ಮುಡಿಸಿಕೊಳ್ಳುವುದು, ನಿನ್ನ ಕಷ್ಟಗಳಿಗೆ ಆಗುವುದು ನಿನ್ನ ಸುಖಗಳಿಗೆ ತಾಗುವುದು, ಪ್ರೀತಿಯಿಂದ  ಒಂದು ಮುತ್ತನ್ನಿಕ್ಕಿವುದು, ಸಾಕು ಬೇಡವೆಂದರೂ ನಿನಗೆ ಇನ್ನೊಂದಿಷ್ಟು ತುತ್ತು ತಿನಿಸುವುದು. ನಿನ್ನ ಕಣ್ಣುಗಳಲ್ಲಿ ನನ್ನದೊಂದಿಷ್ಟು ಕನಸುಗಳನ್ನ ತುಂಬುವುದು, ನನಸಾಗಲಿ ಅನ್ನುತ್ತಾ ದೇವರಲ್ಲಿ ಬೇಡಿಕೊಳ್ಳುವುದು, ಇಷ್ಟೇ. ನಾನು ನನಗೆ ಅಂದುಕೊಂಡ ಬದುಕು. ಆದರೆ ಇಷ್ಟು ಸಣ್ಣ ಕೋರಿಕೆಗಳು ಕೂಡ ಫಲಿಸುವ ಸಣ್ಣ ಸೂಚನೆಗಳು ನನಗೆ ಕಾಣಿಸುತ್ತಿಲ್ಲ. ನೀನೆಂಬುದು ಬ್ರಹ್ಮ ನನ್ನ ಹಣೆಯಲಿ ಬರೆದ ಪದವಲ್ಲ ಅನ್ನಿಸುವ ಈ ಕ್ಷಣಗಳ ಈಟಿ ಎದೆಗೆ ನೀಡುವ ನೋವನ್ನು ಯಾವ ರೀತಿ ತೋಡಿಕೊಳ್ಳಲಿ?
ಎದೆಯ ಎಲ್ಲ ತರಂಗಗಳಲ್ಲಿಯೂ ಬದುಕಿನ ಚಿತ್ತಾರ ಮೂಡಿಸಿದವನು ನೀನು. ಅದೇ ತರಂಗಗಳಿಗೆ ವಿದಾಯದ ಕಹಿಯನ್ನೇಕೆ ತುಂಬಿದೆ ? ಎದೆಯೊಳಗಿನ ಆಪ್ತ ಗೀತೆಯಂತಿದ್ದೆ ಅಲ್ಲವೇ ನೀನು, ಕೊನೆಗೂ ನನ್ನ ಪಾಲಿನ ಕಾಮನಬಿಲ್ಲಾಗಿಬಿಟ್ಟೆಯಲ್ಲ ನೀನಿರುವ ದೂರವೆಷ್ಟು ? ನೀನು ಘೋರಿ ಕಟ್ಟಿದ ಪ್ರತಿ ಕನಸಿಗೂ ಗೂಡು ಕಟ್ಟೋದು ಬಲ್ಲೆ  ಆದರೆ ನೀನಿಲ್ಲದೆ ನಾನು ಕಟ್ಟುವ ಗೂಡಿಗೆ ಹೆಚ್ಚಿನ ಆಯುಷ್ಯವಿಲ್ಲವೆಂದು ಮಾತ್ರ ಬಲ್ಲೆ .
ಬದುಕಿನ ಗೀತೆಯನ್ನ ನಿನ್ನ ಜೊತೆಯೇ ಹಾಡಬೇಕೆಂದು ಬೆಟ್ಟದಷ್ಟು ಕನಸ ಎದೆಯೊಳಗಿಟ್ಟುಕೊಂಡು ಕುಳಿತಿದ್ದ ಹುಡುಗಿ ನಾನು. ಗೀತೆಯ ಮೊದಲ ಸಾಲಿನಲ್ಲೇ ನಿನ್ನ ಜೊತೆಯಿಲ್ಲ..ಹಾಡುವುದಾದರೂ ಹೇಗೆ ? ನಾನು ಹೋಗುವ ದಾರಿಯಲ್ಲಿ ನಿನ್ನ ಪುಟ್ಟ ಹೆಜ್ಜೆ ಜೊತೆಗಿರುತ್ತೆ ಅನ್ನುವ ನಂಬಿಕೆಯಲ್ಲಿ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದೆ..ಮೊದಲೆರೆಡು ಹೆಜ್ಜೆಯೇ ಮುಗಿದಿಲ್ಲ ಅದೆಲ್ಲಿಗೆ ನಿನ್ನ ಪಯಣ?
ಈ ಬದುಕಿನಲ್ಲಿರುವ ಎಲ್ಲಾ ನೋವುಗಳ ತೂಕ ಒಂದಾದರೆ ಕಾರಣವೇ ಇಲ್ಲದೆ ಮುನಿದು ಹೋದ ನೀನು ಮತ್ತೆ ನಿನ್ನ ತಿರಸ್ಕಾರದ ತೂಕವೇ ಇನ್ನೊಂದು. ಇಲ್ಲಿ ಬರೆದಿದ್ದೆಲ್ಲ ನಿನ್ನ ಮೇಲಿನ ಕೋಪದಿಂದಾಗಲೀ ನೋವಿನಿಂದಾಗಲಿ ಅಲ್ಲ ಕಣೋ. ಕೆಲವೊಂದು ಸಲ ಮುಂದಿರುವ ಬದುಕನ್ನ ನೆನೆಸಿಕೊಂಡರೇ ದಿಗಿಲುಗೊಳ್ಳುತ್ತೇನೆ. ಮನುಷ್ಯನಿಗೆ ತುಂಬಾ ನೋವಾದಾಗ, ಕಷ್ಟಗಳು ಬಂದಾಗ, ಇನ್ನು ಬದುಕು ಸಾಧ್ಯವೇ ಇಲ್ಲ ಅನ್ನುವಾಗ ಯಾವ ದೇವರು ನೆನಪಾಗೋದಿಲ್ಲ. ಯಾವುದಾರೊಂದು ಹೆಗಲು ನೆನಪಾಗುತ್ತೆ, ಬೆಚ್ಚನೆಯ ಎದೆ ಬೇಕು ಅನ್ನಿಸುತ್ತೆ, ಕಣ್ಣೊರೆಸುವ ಒಂದು ಕೈಯ್ಯನ್ನ ಜೀವ ಬೇಡುತ್ತೆ. ತುಂಬಾ ನೋವಿನಲ್ಲಿದ್ದೀನಿ, ನೋವಾಗುತ್ತಿದೆ. ದೇವರಂತೂ ನನ್ನ ಬದುಕಿನಲ್ಲಿ ಮುನಿದು ಹೋಗಾಗಿದೆ ಮತ್ತು ದೇವರಂತಿದ್ದ ನೀನು. ಇಬ್ಬರೂ ಕಾರಣ ಹೇಳದೇ ಹೋಗಿದ್ದೀರಿ. ನಾನು ಕಂಡ ಯಾವ ಕನಸುಗಳನ್ನು ನನ್ನ ಎದೆಯ ಮೇಲೆ ಮೂಡಲು ಬಿಡುತ್ತಿಲ್ಲ. ಕೈಯ್ಯ ಯಾವ ಗೆರೆಯೂ ಬದುಕನ್ನು ನಿನ್ನತ್ತ ಕರೆದೊಯ್ಯುತ್ತಿಲ್ಲ. ಹಣೆಯಬರಹದ ಒಂದು ಅಕ್ಷರವೂ ನಿನ್ನತ್ತ ವಾಲುತ್ತಿಲ್ಲ. ನಿಜವಾಗಿಯೂ ನನಗೆ ಬೇಕಿರುವ ಒಪ್ಪಿಗೆ ಖಂಡಿತಾ ಆ ದೇವರದ್ದಲ್ಲ.  ಕೇವಲ ನಿನ್ನದು. ನಿನ್ನ ಒಂದು ಚಿಕ್ಕ ಕಣ್ಣಿನ ಇಷಾರೆ ನನ್ನ ಜೀವನಪೂರ್ತಿ ನಡೆಸಬಲ್ಲುದು, ಇಡೀ ಬಾಳನ್ನು ಹಸನಾಗಿಸಬಲ್ಲದು. ಪುಟ್ಟ ಕಿರುನಗೆ ನನ್ನ ಇಡೀ ದಿನವನ್ನು ಹೂವಿನಂತೆ ಅರಳಿಸಬಲ್ಲುದು. ಹೀಗಿರುವಾಗ ನಾನ್ಯಾಕೆ ದೇವರ ಮುಂದೆ ನನ್ನ ಜೋಳಿಗೆ ಇಟ್ಟು ಬೇಡಿತ್ತಿದ್ದೇನೆ?

ನನ್ನ ಇಡೀ ಬದುಕನ್ನು ಬರೀ ನಿನ್ನ ಜತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯಬೇಕಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿನ್ನ ಜತೆಯಷ್ಟೇ ಹಂಚಿಕೊಳ್ಳಬೇಕಿದೆ. ದೇವರು ಒಪ್ಪದಿದ್ದರೇ ಭಾರವಾದ ಎದೆಯಿಂದ ಒಂದಿಷ್ಟು ಶಪಿಸಬೇಕಿದೆ. ಒಪ್ಪಿದರೆ ನಿನ್ನ ಜೊತೆಗೂಡಿ ಒಂದಿಷ್ಟು ಸುತ್ತುಗಳ ಸುತ್ತಬೇಕಿದೆ. ಮತ್ತಷ್ಟು ಕನಸುಗಳನ್ನು ಬಿತ್ತಬೇಕಿದೆ.

ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ...ನಾನು ಕೂಡ ನಿನ್ನ ಒಂದು ಒಪ್ಪಿಗೆಗೆ.....ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ಕಾಲ ನನ್ನನು ಕರೆದೊಯ್ಯುವ ಕೊನೆಘಳಿಗೆಯ ಕೊನೆಯ ತಿರುವಿನಲ್ಲೂ ನಿನ್ನ ಒಂದು ನಗುವಿಗೆ, ನಿನ್ನ ಬರುವಿಕೆಗೆ ಕಾಯ್ತೀನಿ. ಬೇಕಾದರೆ ನನ್ನದಲ್ಲದ ತಪ್ಪುಗಳಿಗೆ ನಾನೇ ಕ್ಷಮೆ ಕೇಳುತ್ತೇನೆ. ಪ್ಲೀಸ್ ನನ್ನ ಜೀವನಕ್ಕೆ ಒಂದು ಅರ್ಥ ಕೋಡುವೆಯಾ?

2 comments:

  1. ಭಾವಗಳಿಗೆ ಅಕ್ಷರಗಳನ್ನು ಅದೆಷ್ಟು ನಯವಾಗಿ ಪೋಣಿಸಿ ಸುಂದರ ದಾರವನ್ನಾಗಿ ಮಾಡಿ ನಲ್ಲನ ಕೊರಳಿಗೆ ಹಾಕಿಬಿಟ್ಟಿದ್ದಿರಿ..!!
    ಬಹುಶಃ ಜೀವನವೇ ಹೀಗೆ ಅಂದುಕ್ಕೊಂಡದ್ದು, ದಕ್ಕಬೇಕೆಂದುಕೊಂಡದ್ದು ಸಿಕ್ಕುವುದೇ ಇಲ್ಲಾ...!!
    ಆ ಸಿಕ್ಕದೆ ಇದ್ದಾಗ ಆಗುವ ನೋವು ಇದೆಯಲ್ಲ ಹಿಂಡಿ ಬಿಡುತ್ತದೆ...! ನಮ್ಮೊಳಗಿನ ನಮ್ಮನ್ನು ನರಳಿಸಿ ಬಿಡುತ್ತದೆ..
    ಪ್ರೀತಿ ವಿಷಯದಲ್ಲಂತೂ ಹ್ರದಯ ಪುಟ್ಟ ಮಗು...ರಚ್ಚೆ ಹಿಡಿದು ಅಳುತ್ತದೆ...ಬೇಕೇ ಬೇಕು..
    ಬಹಳ ಸೊಗಸಾಗಿ ನೀರೂಪಿಸಿದ್ದಿರಿ..
    ಆದರೂ ಗೆಳತಿ ದಕ್ಕಲಿಲ್ಲವಾದಾಗ ತಾಳ್ಮೆ ಇರಲಿ...ಶುಭವಾಗುತ್ತದೆ...
    gud luck for your love..

    ReplyDelete