Tuesday, November 22, 2011

♥ ಸಾಯುವಷ್ಟು ಪ್ರೀತಿಸಿದವರು ಸಾಕಪ್ಪ ಬೇಡ ಅನ್ನೋವಷ್ಟು ಬೇಡವಾಗ್ತಾರ? ♥

ಪ್ರೇಮಪಾಠದಲ್ಲಿ ಅವರಿಗವರೇ ಗುರು ಗೆಲ್ಲುವವನೇ ಜಾಣ
ಹುಡುಗಿ ಬೇಡಿದರೂ ಹುಡುಗ ಕೇಳಿದರೂ ನೀಡಬೇಕು ಪ್ರಾಣ
ಭಾನ ಹಾರಿದರೂ ಕಡಲ ಈಜಿದರೂ ಸಿಗುದಿಲ್ಲ ಪ್ರೇಮ
ಎದೆಯ ಒಳಗಡೆ ಎಲ್ಲ ಅಡಗಿದೆ ಪ್ರೀತಿ, ಪ್ರೇಮ, ಮರ್ಮ!

ನೀನು ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾದ ಹೊರಡಿಸುವವನು. ನೀನು ಬದುಕಿನ ಮುಖ್ಯ ತಿರುವಿನಲ್ಲಿ ನನ್ನ ಕೈ ಹಿಡಿಯದೇ ಹೋದವನು, ನೀನು ಪ್ರೀತಿಯ ಹೆಸರಲ್ಲಿ ಕೈಗೆ ಮೋಸದ ಸರಕು ತುಂಬಿಸಲು ಬಂದವನು ಕಣೋ. ಕಣ್ಣು ಪ್ರೀತಿಯ ದಾರಿ, ಹೃದಯ ಪ್ರೀತಿಯ ಸ್ವರ್ಗ, ಕನಸು ಪ್ರೀತಿಯ ಹೊರಪ್ರಪಂಚ, ಅಲ್ಲಿ ಮಿಡಿಯುವ ಭಾವನೆಗಳೇ ಬದುಕಿನ ಸಂಗೀತ ಅಂತಾರೆ, ಆದರೆ ಈ ಕಣ್ಣೀರಿದೆಯಲ್ಲ  ಅದು ನಿಜವಾದ ಪ್ರೀತಿಯ ಉಡುಗೊರೆಯಂತೆ , ಅಂತಹ ಕಣ್ಣ ಹನಿಗಳನ್ನ ದುಃಖದ ಸಂಕೇತವನ್ನ ಮಾಡಿದವ ನೀನು. ಈಗ ನನ್ನಿಂದ ಜಾರುವ ನಾಲ್ಕು ಹನಿಗಳು ಯಾಕೋ ಅರ್ಥ ಕಳೆದುಕೊಳ್ಳುತ್ತಿವೆ ಕಣೋ, ಈ ಬದುಕಿಗೆ ಒಂದು ಅರ್ಥ ತಂದವನೂ ನೀನೆ, ಅದಕ್ಕೊಂದು ಅರ್ಥವಿಲ್ಲದಂತೆ ಮಾಡಿದವನೂ ನೀನೆ ಪ್ರತಿ ಕ್ಷಣಗಳೂ ನಗುವಿನ ಕುರಿತೇ ಮಾತನಾಡುತ್ತಿದ್ದ ನೀನು ಇಂದ್ಯಾಕೊ ಕಣ್ಣೀರ ಕಡಲಿಗೆ ನೂಕಿಬಿಟ್ಟೆ?

 ಒಂದು ದುಂಬಿಯು ಒಂದು ಚಿಟ್ಟೆಯು ಬಂತು ಹೂವ ಬಳಿಗೆ
ಸೇರಿ ಕೇಳಿದವು ಯಾರು ಹಿತವರು ನಾವು ಇಬ್ಬರೊಳಗೆ
ಹೂವು ಹೇಳಿತು.. ಮೊದಲು ಬಂದವನೇ ನನ್ನ ಜೇನಿನೊಡೆಯ
ಆಗ ಬಂದವನು ಜೇನುಗಾರನು ಹೀರಿ ಒಯ್ದ ಹನಿಯ

ಯಾರ ಪಾಲು ಯಾರದೋ ಈ ಹೂವ ಲೋಕದಲ್ಲಿ
ಯಾರ ಪ್ರೀತಿ ಯಾರಿಗೋ ಈ ಪ್ರೇಮ ಲೋಕದಲ್ಲಿ !

ಕಂಡ ನನ್ನ ಕನಸುಗಳನ್ನೆಲ್ಲ ಕರುಣೆಯಿಲ್ಲದೇ ಹೊಸಕಿ ಹಾಕಲು ಮನಸ್ಸಾದರೂ ಹೇಗೆ ಬಂತು ? ನಿಮ್ಮ ಜೀವನಕೋಸ್ಕರ ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ ನಮ್ಮ ಪ್ರೀತಿಯ ನದಿಯ ಮಧ್ಯೆ ಅಣೆಕಟ್ಟೆಯಂತೆ ಕಟ್ಟಿಬಿಟ್ಟೆ, ಇಂಥ ಕಲ್ಲು ಮನಸ್ಸು ನಿನಗೆ ಅವಶ್ಯವೇ ? ನಮ್ಮ ಪ್ರೀತಿಗೆ ಮಮತೆಯ ಜೋಗುಳದ ಹಾಡು ಬೇಕಿತ್ತೇ ವಿನಹ ಪಲ್ಲವಿ ಚರಣಗಳಿಲ್ಲದ ಹಾಡಲ್ಲ, . ನಾನಂದುಕೊಂಡ ಹಾಗೆ ಏನೂ ನಡೆಯಲಿಲ್ಲ. ಹಾಗಂತ ತುಂಬ ದೊಡ್ಡದನ್ನೇನು ಬಯಸಿರಲಿಲ್ಲ. ಇಲ್ಲಿಯವರೆಗೆ ಪ್ರೀತಿಪೂರ್ವಕವಾಗಿಯೇ ಕೆಲವು ನೋವುಗಳನ್ನ ಅಪ್ಪಿಕೊಂಡು ಬದುಕಿದೆ ಅದೆಲ್ಲವೂ ನಿನಗಾಗಿ ಅಂತ ನಿನಗೇ ಗೊತ್ತಿದೆ.

ಜಗತ್ತಲ್ಲಿ ಯಾವ ನೋವನ್ನಾದರೂ ಅನುಭವಿಸಬಹುದೇನೋ.. ಆದರೇ ಪ್ರೀತಿಸಿದವರ ನಂಬಿಕೆ ದ್ರೋಹ ? ಬೇಡ ಬಿಡು ಹೆಚ್ಚಿನದೇನನ್ನೂ ಬರೆಯಲಾಗುತ್ತಿಲ್ಲ. ನೀನು ಇಷ್ಟು ದಿನ ತೋರಿಸಿದ ಪ್ರೀತಿಯು ನಿನ್ನ ಪ್ರೀತಿಯ ಮುಖವಾಡವಿರಬಹುದು ಇಲ್ಲ ನನ್ನ ಹಣೆಬರಹವೋ ಗೊತ್ತಿಲ್ಲ ಆದರೂ ನಿನ್ನನ್ನು ಮರೆಯಬೇಕು ಅನ್ನುವ ವಾಕ್ಯವನ್ನೇ ಮನಸ್ಸು ತಪ್ಪೆನ್ನುತ್ತದೆ. ನಿನ್ನನು ಮರೆಯುವುದೆಂದರೆ ನಾನೂ ನೀನೂ ಬೇರೆಯಾಗಬೇಕಲ್ಲವೇ? ಇಬ್ಬರೂ ಒಂದೇ ಆಗಿರುವಾಗ ಮರೆಯುವುದು, ತೊರೆಯುವುದು ಹೇಗೆ ಸಾಧ್ಯ ಅನ್ನುತ್ತದೆ. ಮೌನವಾಗಿ ಸೋಲೊಪ್ಪಿಕೊಳ್ಳುತ್ತೇನೆ. ನಿನ್ನ ಪ್ರೀತಿ, ನನ್ನ ಉಸಿರು ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿದೆ. ನಿನ್ನ ಹೂಂ ಉಹೂಂ ಗಳ ಮಧ್ಯೆಯೇ ಜೋಕಾಲಿಯಾಡುತಿದೆ ನನ್ನ ಬದುಕು. ಪ್ರೀತಿಯೆಂದರೆ ಭೀಕರ; ಪ್ರೀತಿಯೆಂದರೆ ಸುಂದರ, ಈ ಎರಡು ವ್ಯಾಖ್ಯೆಗಳಿಗೆ ನಿನ್ನುತ್ತರವೇ ಅಂತಿಮ ನಿರ್ದಾರ. 

ಕಾರಣವೇ ಇಲ್ಲದೇ ಇಷ್ಟವಾದವನು ನೀನು.ನಿನ್ನ ಪ್ರೀತಿಸಲು ಅಸಲು ನನಗೆ ಕಾರಣವೇ ಇರಲಿಲ್ಲ. 
ನಂಬಿಕೆ ದ್ರೋಹಕ್ಕೆ ಇನ್ನೊಂದು ಹೆಸರು ಕೂಡ ನೀನೆ!!

2 comments:

  1. ನಿಮ್ಮ ಇನಿಯನಿಗೆ ಬೇಗ ಬಹು ಬೇಗ ತಿಳಿಯಲಿ ಪ್ರೀತಿಯೆಂದರೆ ಸುಂದರ ಎಂದು ... ಪ್ರೀತಿಗೆ ಎಂದೂ ಸೋಲಿಲ್ಲ , ಸಾವಿಲ್ಲ ಎನ್ನುವ ಮಾತು ಸತ್ಯವೇ ಆಗಿದ್ದರೆ ಅತೀ ಶೀಘ್ರದಲ್ಲಿ ನಿಮ್ಮ ಪ್ರೀತಿ ನಿಮಗೆ ಸಿಗುವುದರಲ್ಲಿ ಸಂಶಯವೇ ಇಲ್ಲ .....

    ReplyDelete
  2. nimma hairake bahubega nijvagali............. thnk u very much

    ReplyDelete