Tuesday, November 30, 2010

ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ.......

ನನ್ನ ಉಸಿರಲ್ಲಿ ಉಸಿರಾಗಿ ಬೆರೆತಿರುವವನಿಗೆ,

ಪ್ರತಿದಿನ ಬೆಳಕು ಹರಿಯುವ ಮುನ್ನ ನನ್ನ ನಿದ್ದೆ ಕೆಡಿಸಿ ಕ್ಷಣ ಕ್ಷಣಕ್ಕೂ ನಿನಗಾಗಿ ಕಾಯುವಂತೆ ಮಾಡಿ ನನ್ನೆದುಬಾರದ ಚಿತ್ತ ಚೋರನೆ ಯಾಕೆ ಕೋಪ? ಅದ್ಯಾವಾಗ ಎಲ್ಲಿ, ಹೇಗೆ ಆರಂಭವಾಯಿತೋ ಈ ಪ್ರೀತಿ. ಇಷ್ಟು ವರ್ಷವಾದರೂ ಇಂದಿಗೂ ಅರ್ಥವಾಗಲಿಲ್ಲ. ನಿನ್ನ ಪ್ರೇಯಸಿಯಾಗಿ ನೀನಿದ್ದಲ್ಲಿಗೆ ಬಂದು ನಿನಗೆ ಪ್ರೀತಿಯೆಂಬ ಸಿಹಿಮುತ್ತಿಟ್ಟಿರುವುದು ಎಷ್ಟು ನಿಜವೋ ನಿನ್ನ ಮಧುರ ಭಾವನೆಗಳ ಮಡಿಲಿಗೆ ನಾನು ಜಾರಿ ಬಿದ್ದಿರುವುದು ಅಷ್ಟೇ ನಿಜ. ಯಾರನ್ನೂ ಪ್ರೀತಿ ಮಾಡಬಾರದು, ಮನೆಯವರ ಇಷ್ಟದಂತೆ ನಡೆದುಕೊಳ್ಳಬೇಕು ಅಂತ ಎಣಿಸಿಕೊಂಡಿದ್ದ ನನ್ನನ್ನು ಆ ನಿನ್ನ ಮೃದು ಮಾತುಗಳು, ಮಧುರ ಬಾವನೆಗಳು ಕೆಲವೇ ದಿನಗಳಲ್ಲಿ "ಬೋಲ್ಡ್" ಆಗುವಂತೆ ಮಾಡಿದ್ದವು. ಮಾತು- ಮಾತಿಗೂ ನೀನಾಡಿದ ಪ್ರೀತಿ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಂಡು ನಿನ್ನನ್ನು ರೇಗಿಸಿ ನಿನ್ನ ಭಾವನೆಗಳಿಗೆ ತಡೆಗೋಡೆಯಾಗಲೂ ಪ್ರಯತ್ನಿಸಿದರೂ ಅದನ್ನು ದಾಟಿ ಬಂದು ನನ್ನ ಹೃದಯದಲ್ಲಿ ಅವಿತುಕೊಂಡಿರುವ ನಿನಗೆ ನಿಜವಾಗಿ ಸೋತಿದ್ದೇನೆ.

ಬೆಳಿಗ್ಗೆ ಗುಡ್ ಮಾರ್ನಿಂಗ್ ನಿಂದ ಸಂಜೆ ಗುಡ್ ನೈಟ್ ವರೆಗೂ ನಿನ್ಹತ್ರ ಮಾತಾಡ್ತಾ ಇರ್ಬೇಕು ಅನ್ನೊ ಆಸೆ ನನ್ಗೆ. ಆದ್ರೆ ನಿನ್ ಸಿಗಲ್ಲ, ಆವಾಗ ನಾನು ಎಷ್ಟು ಪರಿತಪಿಸುತ್ತೇನೆ ಗೊತ್ತಾ? ನಿನ್ನ ಹೃದಯ ಬಡಿತದೊಂದಿಗೆ ಒಂದಾಗಿರುವ ನನ್ನ ನಾಡಿಮಿಡಿತ ನೋಡಿ ಯಾರ ದೃಷ್ಟಿಯೂ ನಿನ್ನ ಮೇಲೆ ಬೀಳದಂತೆ ನನ್ನ ಕಣ್ಣುಗಳಲ್ಲಿ ನಿನ್ನನ್ನು ಸೆರೆ ಹಿಡಿದು ರೆಪ್ಪೆಗಿಂತ ಹೆಚ್ಚು ಜೋಪಾನವಾಗಿ ಕಾಪಾಡುತಿದ್ದೇನೆ. ಬೆಳದಿಂಗಳ ರಾತ್ರಿಯಲ್ಲಿ ಚುಮು-ಚುಮು ಚಳಿಗೆ ಮೈಯೊಡ್ಡುತಾ ಏಕಾಂತದಲ್ಲಿ ಕುಳಿತು ಆಕಾಶದಲ್ಲಿ ನಗುತ್ತಿರುವ ಚಂದಮಾಮನೊಂದಿಗೆ ನಿನ್ನ ಕನಸು ಕಾಣುತಿದ್ದರೆ ಮನಸ್ಸು ನನ್ನನ್ನು ಎಲ್ಲಿಂದಲೆಲ್ಲಿಗೋ ಕರೆದೊಯ್ಯುತ್ತದೆ.

ಪ್ರತಿದಿನವನ್ನು ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಆರಂಬಿಸಬೇಕೆಂಬ ಆಶಯದೊಂದಿಗೆ ಕಾಲ ಕಳೆಯಿತಿದ್ದೆ. ಆದರೆ ಆ ಕನಸು ನನಸಾಗಲಿಲ್ಲ. ನಾನು ದೇವರಲ್ಲಿ ಕೇಳಿಕೊಂಡ ಬಹುಸಂಖ್ಯಾತ ಬೇಡಿಕೆಕೆಗಳಲ್ಲಿ  "ನಾನು ನಿನ್ನ ಜೊತೆ ಸದಾ ಇರಬೇಕು" ಅಂತ ಕೇಳಿಕೊಂಡ ಒಂದೇ ಒಂದು ವರ ಸಾಕಾಗಿತ್ತು ಕಣೋ... ಆದರೆ ದೇವರು ಅದಕ್ಕೆ ಅಸ್ತು ಅನ್ನಲ್ಲಿಲ್ಲ. ಇದೆಲ್ಲ ನನ್ನೆದೆ ಆಳದಿಂದ ಉಕ್ಕುತಿರುವ ಮಾತು ಕಣೊ. ನಂಬು ನನ್ನಾಣೆ. ದೇವರಾಣೆ. ಪ್ರೀತಿಮೇಲಾಣೆ. ನಿನ್ನ ಪ್ರೀತಿ ಸಿಗದ ಹೊರತು ಬದುಕು ಬರಡು ಕಣೊ!!.

ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ! ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ನೆನಪಿದೆಯೆ ಮೊದಲ ನೋಟ?
ನೆನಪಿದೆಯೆ ಮೊದಲ ಸ್ಪರ್ಶ?
ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನಾ?
ನೆನಪಿದೆಯೆ ಮೊದಲ ಕನಸು?
ನೆನಪಿದೆಯೆ ಮೊದಲ ಮುನಿಸೂ?
ನೆನಪಿದೆಯೆ ಕಂಬನಿ ತುಂಬಿ-ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ನೆನಪಿದೆಯೆ ಮೊದಲ ಕವನ?
ನೆನಪಿದೆಯೆ ಮೊದಲ ಪಯಣಾ?
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?
ನೀ ಇಲ್ಲವಾದರೆ ನಾ ಹೆಗೆ ಬಾಳಲೀ?

ಅಂದು ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ತುಂಟ ನೋಟ ಬೀರಿದಾಗಲೇ ನಿನ್ನ ಪ್ರತಿಬಿಂಬ ನನ್ನ ಕಣ್ಣಲ್ಲೇನೋ...ಸನ್ನೆ ಮಾಡಿ, "ನನ್ನ ನೀನು ಪ್ರೀತಿ ಮಾಡಲ್ವಾ?" ಅಂತ ನೀನು ಹೇಳಿದ ಆ ಕ್ಷಣದಲ್ಲೇ ನಿನ್ನನ್ನು ನನ್ನ ಕಣ್ಣಲ್ಲಿ ಬಚ್ಚಿಟ್ಟು ನೋಟ ಬದಲಿಸಿದ್ದೆ. ಈಗ ಮತ್ತೆ ನೀನು ನನ್ನ ಕಣ್ಣ ಬಿಂಬದಿಂದ ಹೊರನೆಡೆದರೆ ನನ್ನ ದೃಷ್ಟಿಯೂ ನಿನ್ನ ಜೊತೆಗೆ ಹೋಗಬಹುದು. ಹಿಂದೊಮ್ಮೆ ನನ್ನಿಂದಾಗಿ ನಿನಗಾದ ನೋವು, ಬೇಸರ, ಸಿಟ್ಟು, ಜಿಗುಪ್ಸೆ ಇನ್ನೆಂದಿಗೂ ಆಗದಂತೆ ನಿನ್ನ ಮನದಲ್ಲಿ ಸದಾ ಜೊತೆಗಿರಬೇಕೆಂದುಕೊಂಡಿದ್ದೇನೆ. ನಿನ್ನ ಭಾವನೆಗಳಿಗೆ ಪ್ರತಿಭಾವನೆಗಳನ್ನು ನೀಡಲೆಂದೇ ಪ್ರತಿ ಉಸಿರಲ್ಲೂ ನಿನಗಾಗಿ ಕಾಯುತ್ತಿರುತ್ತೇನೆ.ಬತ್ತಿದೆ ನನ್ನೆದೆಯ ಮಾತು. ಮುಗಿಯದ ಪ್ರಶ್ನೆಗಳಿಗೆ, ನನಗೆ, ನನ್ನ ಪ್ರೀತಿಗೆ - ನೀನೊಬ್ಬನೆ ಉತ್ತರ ಕಣೋ !. ನಿನಗಾಗಿ ನನ್ನ ಹೃದಯದಲ್ಲಿ ಸುಂದರವಾದ ನೆನಪುಗಳನ್ನು ಕಟ್ಟಿಕೊಂಡು ಎದೆಯಲ್ಲಿ ನಾನು ನಿನಗಾಗಿ ನಿರ್ಮಿಸಿದ ಪುಟ್ಟ ಅರಮನೆಯಿಂದ ಯಾವತ್ತು ಜಾರಬೇಡ.

ಒಂದು ಮಾತ್ರ ನೆನಪಿಟ್ಕೋ... ನಾನು ನಿನ್ನನ್ನು ಪ್ರೀತಿಸಿದಷ್ಟು ಈ ಜಗತ್ತಿನಲ್ಲಿ ನಿನ್ನ ಪ್ರೀತಿಸುವವರು ಯಾರೂ ಇಲ್ಲಾ ಕಣೋ.ನಾನು ಸತ್ತರೂ ನಿನ್ನ ಮೇಲಿರೋ ನನ್ನ ಪ್ರೀತಿ ಸಾಯಲ್ಲಾ ಅದೆಂದಿಗೂ ಅಮರ,ಶಾಶ್ವತ.ನನ್ನ ಹಣೆಯಲಿ ಬರೆಯದ ನಿನ್ನ ಹೆಸರನ್ನು ಹೃದಯದಲ್ಲಿ ನಾನೇ ಅಳಿಸಿ ಹೋಗದಂತೆ ಕೊರೆದಿದ್ದೇನೆ. ನನ್ನ ಹೃದಯದಲ್ಲಿ ನಿನಗೆ ಮೀಸಲಾಗಿರೋ ಜಾಗದಲ್ಲಿ ಮತ್ಯಾರು ಬರಲಸಾಧ್ಯ. ನೀನೇ ನೆಟ್ಟಿರೋ ಪ್ರೀತಿಯೆಂಬ ಸಸ್ಯವನ್ನು ಎಂದಿಗೂ ಕಿತ್ತೊಗೆಯಬೇಡ....ನೀನೆಲ್ಲೇ ಇದ್ದರೂ ಸುಖವಾಗಿರು ಎಂದು ಪ್ರಾರ್ಥಿಸುತ್ತೇನೆ.ನೀನೆಂದಿಗೂ ನನ್ನವನೇ.ನನ್ನ ಪ್ರೀತಿಯನ್ನು ಬಿಟ್ಟು ಹೋಗಬೇಡ ....................
                                  
                                                                ಇಂತಿ ನಿನ್ನ ಮರೆಯಲು ಪ್ರಯತ್ನಿಸಿ ಸೋತವಳು..:


No comments:

Post a Comment