Sunday, January 1, 2012

♥♥♥ ಈ ರಾಧೆಗೆ ಗೋಪಾಲನ ಸಂತೋಷವೇ ನಿಜವಾದ ಆನಂದವು ♥♥♥


ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ
ನಿನ್ನ ಗುರುತು ಕಂಡಾಯ್ತು
ಎಷ್ಟೋ ದಿಕ್ಕುಗಳಲ್ಲಿ ಎಷ್ಟೋ ಬೆಳಕುಗಳಲ್ಲಿ
ನಿನ್ನ ನೆರಳು ದೊರೆತಾಯ್ತು
ನಿನ್ನ ನಗೆಯು ನನ್ನೆದೆಗೆ ಅಮೃತ ಕಳಸ
ನಿನ್ನ ಸ್ಪರ್ಶವೇ ನನ್ನ ಉಸಿರಿಗೆ ಮಾಯದ ಹರುಷ
ನಿನ್ನ ಹೃದಯದ ಕಲರವದಲಿ ರಾಗವ ತೆಗೆದು
ನನ್ನ ಹಣೆಯ ಕುಂಕುಮದಲ್ಲಿ ಕವಿತೆಯ ಬರೆದು
ಹಾಡುತ್ತಿದೆ ನನ್ನ ಮನಸ್ಸು ನಿನ್ನೇ ಪ್ರೀತಿಸುವೆ ಎಂದು

ಪ್ರೀತಿಸುವುದು ಒಂದು ಕಲೆ ಎಂದು ತೋರಿಸಿಕೊಟ್ಟವನು ನೀ, ನಟಿಸಿ ಹಾಗೆ ಮಾಯವಾದೆ  ನಿನಗೆ ಗೊತ್ತಿದೆಯಾ? ದೇವತೆಗಳೂ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಮನ್ಮಥ ಎಂಬ ದೇವರು ಪ್ರೇಮದ ಸಂಕೇತವಲ್ಲದೇ ಮತ್ತೇನೂ ಅಲ್ಲ. ಇತಿಹಾಸದಲ್ಲಂತೂ ಪ್ರೀತಿಗಾಗಿ ಸಾಮ್ರಾಜ್ಯಗಳೇ ಉರುಳಿವೆ, ಪ್ರಾಣ ತ್ಯಾಗ ಮಾಡಿದ ಕೋಟಿ ಕೋಟಿ ಪ್ರೇಮಿಗಳು ಈ ಮಣ್ಣಿನಲ್ಲಿದ್ದಾರೆ. ಲೈಲಾ- ಮಜ್ನು ಅವರನ್ನೂ ಮೀರುವ ಕೋಟಿ ಕೋಟಿ ಪ್ರೇಮಿಗಳಿದ್ದಾರೆ. ಅವರಿಗೆಲ್ಲ ಇತಿಹಾಸದಲ್ಲಿ ಜಾಗ ಸಾಲುತ್ತಿಲ್ಲ ಅಷ್ಟೆ.  ಪ್ರೀತಿಸುವುದೆಂದರೆ?: ಓ ಮೌನವೇ ನಿನಗೆ ತಿಳಿದಿರಲಿ, ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಬದುಕುವುದಕ್ಕಾಗಿ ಪ್ರೀತಿಸುವವರು ಮತ್ತು ಪ್ರೀತಿಸುವುದಕ್ಕಾಗೇ ಬದುಕುವವರು. ಯಾರು ಯಾರು ಯಾವ ವರ್ಗಕ್ಕೆ ಸೇರಿದ ಜನ ಎಂದು ಅವರವರೇ ಗುರುತಿಸಿಕೊಳ್ಳಬೇಕು.

ನೆನಪಿದೆಯ ನನಗೆ ನೀನು ಯಾವಾಗಲೂ ಹೇಳುತಿರುತಿದ್ದೆ, ನಿನ್ನದು ಪ್ರೀತಿಯಲ್ಲ ಹಠ ಅಂತ ನಿನಗೆ ಗೊತ್ತಾ ಹುಡುಗ ಪ್ರೀತಿ ಎಂಬುದು ಚಟ ಅಲ್ಲ; ಹಠ. ಏಳುನೂರು ಕೋಟಿ ಜನರಿರುವ ಈ ಭೂಮಿ ಮೇಲೆ ನಾನು ನಿನ್ನನ್ನೇ ಪ್ರೀತಿಸುತ್ತೇನೆ ಎಂದುಕೊಳ್ಳುವುದು ಹಠವಲ್ಲದೇ ಮತ್ತೇನು? ಪ್ರೀತಿ ಹಠವಾದರೆ ಮಾತ್ರ ಒಲಿಯುತ್ತದೆ, ಚಟವಾಯಿತೋ ಒದಿಯುತ್ತದೆ.

ನನಗೆ ಗೊತ್ತು. ಪ್ರೇಮ ತರ್ಕದ ಮೇಲೆ ನಿಲ್ಲುವುದಿಲ್ಲ. ಷರತ್ತುಗಳಿಲ್ಲದ ನಮ್ಮ ಪ್ರೇಮದ ಆಳ, ವಿಸ್ತಾರ ನಮ್ಮಿಬ್ಬರಿಗಷ್ಟೇ ಗೊತ್ತು. ಅದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗದಂತೆ, ಸರಕಿನಂತೆ ಬೆಲೆ ಕಟ್ಟಲೂ ಆಗದಂತೆ ಗುಪ್ತಗಾಮಿನಿಯಾಗಿ ನಮ್ಮ ಪ್ರೀತಿ ಹರಿದದ್ದು ದಾಖಲಿಸಲಾಗದ ಅಧ್ಯಾಯ. ನಿನಗದು ನೆನಪುಂಟಾ? ಯಾರೂ ಊಹಿಸದ, ಅನುಭವಿಸದ ಸಾಧ್ಯವಾಗದ ಪ್ರೇಮ ಸಮುದ್ರದಲ್ಲಿ ಜೀವರಕ್ಷಕ ಸಾಧನಗಳನ್ನು ಕಟ್ಟಿಕೊಳ್ಳದೆ ಈಜಿದವರು ನಾವಿಬ್ಬರು, ಕಣ್ಣು ಮುಚ್ಚಿ ಒಮ್ಮೆ ಹಿಂತಿರುಗಿ ನೋಡು.ಮರೆತು ಹೋಗುವಂತಹ, ಅಳಿಸಿ ಹೋಗುವಂತಹ ಪ್ರೇಮ ನಮ್ಮ ಮಧ್ಯೆ ಎಂದೂ ಇರಲಿಲ್ಲ. (ಅಳಿಸಿಹೋಗುವುದಾದರೆ ಅದು ಪ್ರೇಮ ಹೇಗಾಗುತ್ತದೆಯೆ? ಅದನ್ನು ಪ್ರೀತಿ ಅಂತ ಕರೇತಾರೇನೋ ? )

ಪ್ರೇಮ ಬಲೆ ಅಲ್ಲ, ನೆಲೆ. ವೈರಿಯ ಬಂದೂಕಿಗೆ ಎದೆಯೊಡ್ಡುವ ಯೋಧ ಕೂಡ ತನ್ನ ಹುಡುಗಿಯ ಮುಂದೆ ಲವ್‌ ಯೂ ಎನ್ನಲು ಕಂಪಿಸುತ್ತಾನೆ. ಪ್ರೀತಿ ಒತ್ತಕ್ಕಿ ಇಟ್ಟ ಸ್ಪ್ರಿಂಗಿನಂತೆ, ಗಾಳಿ ತುಂಬಿದ ಬಲೂನಿನಂತೆ. ಅದು ತನ್ನ ಇರುವಿಕೆಯನ್ನು ಸದಾ ಖಚಿತಪಡಿಸುತ್ತಿರಬೇಕು. ಹೃದಯದ ರಂಗಸಜ್ಜಿಕೆ ಮೇಲೆ ಪ್ರೇಮ ನಿತ್ಯವೂ ಪ್ರಯೋಗಗೊಳ್ಳಬೇಕು, ಮನಸಿನ ಪಲ್ಲಕ್ಕಿ ಮೇಲೆ ನಿತ್ಯವೂ ಪ್ರೇಮಕ್ಕೆ ಪಟ್ಟಾಭಿಷೇಕ ನಡೆಯಬೇಕು, ಇಬ್ಬರ ಭಾವ- ಬದುಕು ಒಂದಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ದಿಟ್ಟವಾಗಿ, ಗಟ್ಟಿಯಾಗಿ ನಿಲ್ಲಬೇಕು. "ಚರ್ಮಗಳ ಘರ್ಷಣೆ"ಯೇ ಪ್ರೀತಿಯಲ್ಲ ಅದಕ್ಕೂ ಮಿಗಿಲಾದ ಅನುಭೂತಿಯದು.

ಅನುರಾಗದ ತುಂಬಿದ ಹುಡುಗ ನಿನಗೆ ಗೊತ್ತಾ? ಮನೆಯಿದ್ದು, ಗಂಡನಿದ್ದು, ಕೃಷ್ಣನ ಮೋಹನ ಮುರಳಿಗೆ ಓಗೊಟ್ಟವಳು ರಾಧೆ. ಹದಿನಾರು ಸಾವಿರ ಪ್ರೇಯಸಿಯರಿದ್ದೂ ರಾಧೆಯ ಪ್ರೇಮಕ್ಕೆ ಒಲಿದವನು ಕೃಷ್ಣ. ಅವರ ಪ್ರೇಮವನ್ನು ಲೋಕ ಸಂಶಯದ ಕಣ್ಣಿನಿಂದ ಕಾಣಲಿಲ್ಲ; ಬದಲಾಗಿ ಅದನ್ನು 'ದೈವಿಕ ಪ್ರೇಮ"ವೆಂದು ಗೌರವಿಸಿತು. ರಾಧೆಯೂ ಕೂಡ ಕೄಷ್ಣನ ಮನಸಾ ಪ್ರೀತಿಗೆ ಓಗೊಟ್ಟು ಗೌರವಿಸಿದವಳು. ಅವಳೆಂದು ರುಕ್ಮೀಣಿಗೆ ಸವತಿಯಾಗಿರಲಿಲ್ಲ ಮತ್ತು ಕೃಷ್ಣನ ಸಂತೋಷವೇ ತನ್ನ ಸಂತೋಷವೆಂದುಕೊಂಡು ಬದುಕಿದವಳು. ನಾನೂ ಕೂಡ ರಾಧೆಯಂತೆಯೇ 

ನನ್ನನ್ನು ಮರೆತುಬಿಡು, ನನ್ನ ಜೀವನದಿಂದ ದೂರಸರಿ ಎಂದು ನೀ ಹೇಳಿದ ಮೇಲೆ ನಾನು ಸಾವನ್ನಾಗಲಿ, ಇನ್ನೊಂದು ಪ್ರೀತಿಯನ್ನಾಗಲಿ ಬಯಸಲಿಲ್ಲ. ಪ್ರೀತಿ ಭಗ್ನವಾದಾಗ ಸಾವು ಕರುಣಾಮಯಿ ಎನಿಸುತ್ತದೆ. ಯಾಕೆಂದರೆ ಇವರು ಪ್ರೀತಿಸುವುದನ್ನೇ ಬದುಕು ಎಂದುಕೊಂಡರು ಆದರೆ, ನಿನ್ನ ಹುಡುಗಿ ಹಾಗಲ್ಲ. ನೀನಿಲ್ಲದೇ ಪ್ರಪಂಚವೇ ಬೇಡ ಎನ್ನುವಂಥವಳಲ್ಲ, ಸಾವಿರ ಜನುಮ ಇದ್ದರೂ ನಾನು ನಿನ್ನವಳಾಗೇ ಉಳಿದಿರುತ್ತೇನೆ ಎನ್ನುವಂಥವಳು. ಪ್ರೀತಿ ಮುರಿದಾದ ಮೇಲೆ ಬದುಕುವುದೂ ಅನಿವರ್ಯವಂತೆ. ಮನಸ್ಸಿನ ಪುಟಗಳಲ್ಲಿ ನೀನು ನಾನಂದುಕೊಂಡಷ್ಟು ಕೆಟ್ಟವನಲ್ಲ ಅಂತ ಯಾಕನ್ನಿಸುತ್ತಿದೆಯೋ ಗೊತ್ತಿಲ್ಲ.

ನನಗೆ ಗೊತ್ತು  ಈ ಪತ್ರ ಓದಿದರೆ ನೀ ನನಗೋಸ್ಕರ ಎರಡು ಹನಿಯಾದರೂ ಕಣ್ಣೀರಿಡ್ತಿಯ ಅಂತ, ಮತ್ತ್ಯಾವ ಜನ್ಮದಲ್ಲಿ ನಿನ್ನವಳಾಗ್ತೀನೋ ಗೊತ್ತಿಲ್ಲ. 

                                                                                             ಇತಿ ನಿನ್ನ 
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲದ ಹುಡುಗಿ

4 comments:

  1. ಭಾವಗಳನ್ನು ಮುದ್ದಾಗಿ ಪೋಣಿಸುವ ನಿಮ್ಮ ಶೈಲಿಗೊಂದು ಸಲಾಂ....
    ಬಹಳ ಇಷ್ಟವಾಯ್ತು ನಿಮ್ಮ ಲೇಖನ...
    ನಿಮ್ಮ ಮುದ್ದು ಹುಡುಗನಿಗೆ ಇದು ತಲುಪಲಿ..

    ReplyDelete
  2. ನಿಮ್ಮ ಈ ನಿಜವಾದ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಾರನೇ ನಿಮ್ಮ ಹುಡುಗ...?? ನಿಜಕ್ಕೂ ಬೇಸರದ ಸಂಗತಿ .... ನಿಮ್ಮ ಪ್ರೀತಿಯು ಬಹುಬೇಗ ನಿಮಗೆ ಸಿಗಲಿ ಎಂಬುದು ನನ್ನ ಮನದಾಳದ ಹಾರೈಕೆ .....

    ReplyDelete
  3. ಭಾವಗಳನ್ನು ಮುದ್ದಾಗಿ ಪೋಣಿಸುವ ನಿಮ್ಮ ಶೈಲಿಗೊಂದು ಸಲಾಂ....
    ಬಹಳ ಇಷ್ಟವಾಯ್ತು ನಿಮ್ಮ ಲೇಖನ...
    ನಿಮ್ಮ ಮುದ್ದು ಹುಡುಗನಿಗೆ ಇದು ತಲುಪಲಿ..

    ReplyDelete