Sunday, September 26, 2010

ಮನಸೆಳೆದ ಹುಡುಗನಿಗೆ,

ಕುಡಿನೋಟದಿಂದ ಸೆಳೆದು, ನನ್ನ ಮನಸಿನೊಳಗೆ ಅಡಗಿ, ಬಿಗಿ ಬಂಧನವೊಂದನ್ನು ಸೃಷ್ಟಿಸಿ, ಅದರೊಳಗೆ ನನ್ನ ಬಂದಿಸಿ ಏಕಾಏಕಿ ದೂರತಳ್ಳಿದೆಯಲ್ಲ......ಕೊನೆಗೂ ಒಲುಮೆಯೊಂದು ಮಳೆಬಿಲ್ಲೆಂದು ನಿರೂಪಿಸಿದೆ. ಕಣ್ಣ ಮುಂದೊಂದು ಪ್ರೀತಿಯ ಬಲೆ ಹೆಣೆದು ಕೈ ಚಾಚುವ ಮುನ್ನ ಮರೆಯಾಗಿ ಬಿಡುವ ಕಾಮನಬಿಲ್ಲಿಗೂ, ಒಲವಿಗೂ ಅಂಥ ವ್ಯತ್ಯಾಸವೇನಿಲ್ಲ. ಸಾವಿರಾರು ಕನಸುಗಳ ಜಾಲವಿಂದು ನನ್ನಿಂದ ಬಿಡಿಬಿಡಿಯಾಗಿ ಸರಿದು ಹೋಗುತ್ತಿದ್ದರೆ ನಾನು ಮೂಕವಾಗಿ ನೋಡುತ್ತಾ ನಿಂತಿದ್ದೇನೆ, ಬೊಗಸೆಯಲಿ ಭದ್ರವಾಗಿದೆಯೆಂದುಕೊಂಡಿದ್ದ ಒಲವಿಂದು ಕೈಜಾರಿ ಸರಿದು ಬಹುದೂರ ಸರಿದು ಹೋಗುತ್ತಿದ್ದರೂ ಅದು ನನ್ನ ಅಂಗೈಯೊಳಗೆ ಇದೆಯೇನೋ ಎನ್ನುವಂತೆ ಮುಷ್ಟಿಯನ್ನು ಭದ್ರವಾಗಿ ಹಿಡಿದಿದ್ದೇನೆ. ಕಳೆದುಹೋದ ನನ್ನೊಲವನ್ನು ಯಾವುದರಿಂದಲೂ ಬಂದಿಸಲಾಗದ ಅಸಾಹಯಕತೆಯಲ್ಲಿ ನನ್ನೊಳಗೆ ಅಳುತ್ತಿದ್ದೇನೆ.............. ನನ್ನ ಕಣ್ಣೀರು ಒರೆಸಲು ನೀನು ಬರಲಾರೆಯೆಂದು ತಿಳಿದಿದ್ದರೂ ನಿನ್ನ ಬರುವಿಗಾಗಿ ಕಣ್ಣ ಕೊನೆಯಲ್ಲೊಂದು ದೃಷ್ಟಿ ನಿನ್ನತ್ತಲೇ ನೆಟ್ಟಿದ್ದೇನೆ........ಅಂದು ನಿನ್ನ ಪ್ರೀತಿಯ ಮದುರಯಾತನೆಯಲ್ಲಿ ಮಿಂದಿದ್ದ ಇದೇ ಮನವಿಂದು ನಿನ್ನ ಪ್ರೀತಿಯಿಲ್ಲದೇ ನರಳಿ ನರಳಿ ವಿಲಪಿಸುತ್ತಿದೆ.


ಹೇಳದೆ ಕೇಳದೆ ನೀ ನನ್ನೆದೆ ಸೇರಿದೆ...
ಎಲ್ಲಿಯೂ ಹೋಗದೆ ನಿನಲ್ಲಿ ಬೇರೂರಿದೆಯೊ?


ಮನಸು ಮಾದಿದ್ದರೆ ನೀ ನನ್ನ ತೊರೆದ ದಿನವೇ ನನ್ನೊಳಗಿನ ನಿನ್ನನ್ನು, ನಿನ್ನೊಲವನ್ನು ಬೇರು ಸಹಿತ ಕಿತ್ತೊಗೆಯಬಹುದಿತ್ತು ಆದರೆ ಮನಸೊಪ್ಪದು. ಬೇರು ಕೆತ್ತೆಸದ ಗಿಡ ಬದುಕಲಾರದೆ ಸತ್ತು ಹೋಗಬಹುದು ಆದರೆ ಪ್ರೀತಿ ಸಾಯುವುದಿಲ್ಲ.ಇಷ್ಟೆಲ್ಲ ನೋವಿನ ನಡುವೆಯೂ ಸಣ್ಣದೊಂದು ಹಿತವೇನೆಂದರೆ ನೀನು ನನಗೆ ಸಿಕ್ಕಿದ್ದು, ಯಾವುದೂ ಸಂಬಂಧದ ರೂಪದಲ್ಲಿ ನಮ್ಮ ಮನೆಗೆ ಬಂದ ನೀನು ನೀನದ್ಯಾವ ಮಾಯೆಯಲ್ಲಿ ನನ್ನ ಮನಸೆಳೆದೆಯೋ... ಬೆಳದಿಂಗಳಾಗಿ ನೀನು ನಮ್ಮನೆಗೆ ಅಲ್ಲಲ್ಲಿ ನನ್ನೊಳಗೆ ಒಂದ್ದಿದ್ದೆ, ನಿನ್ನಾಗಮನಕ್ಕೆ ನಾನೂ ಸಹ ಹೃದಯವನ್ನು ತೋರಣವಾಗಿಸಿ ನಿನ್ನನ್ನು ಅಹ್ವಾನಿಸಿ ದ್ದೆ. ಅಂದು ನೀ ನನ್ನನ್ನು ಕಂಡಾಗೆಲ್ಲಾ ನಿನ್ನ ಕಣ್ಣಲ್ಲಿ ಉಕ್ಕಿ ಬಂದ ಮೆಚ್ಚುಗೆಯ ಮಾತುಗಳು, ತುಟಿಗಳಲ್ಲಿ ಮೂಡಿ ಬಂದ ಮಂದಹಾಸ .... ಇವೆಲ್ಲದರಿಂದ ಆಪ್ತನಾಗಿ ತಂಗಾಳಿಯ ಹಿತ ತಂದಿದ್ದೆ. ಸಪ್ತವರ್ಣಗಳ ತೋರಿಸಿ ಕಣ್ಣಂಚಲೇ ಕಾಮನಬಿಲ್ಲು ಮೂಡಿಸಿ ನನ್ನನ್ನು ಪ್ರೀತಿಪರವಶಳನ್ನಾಗಿಸಿದ್ದ ನಿನ್ನ ವೈಖರಿ ಅದ್ಬುತ, ಅತಿಶಯವಾದುದು. ಅಂದಿನ ನಿನ್ನ ಒಳ್ಳೆಯ ಗುಣ, ಪ್ರೀತಿಯ ಮಾತುಗಳು.....ನಿನಗೆ ಸೋಲಲು ಅದಕ್ಕಿಂತ ದೊಡ್ಡ ಕಾರಣ ಬೇಕಿಲ್ಲ. ಮುಂಜಾನೆಯ ಮಂಜಿನಲ್ಲಿ ತಂಪಾಗಿ ಬಂದ ತಂಗಾಳಿಯಂತೆ ನನ್ನ ಮನ ಕದಲಿಸಿ ಬದುಕನ್ನು ಒಗಟಾಗಿಸಿದೆಯಲ್ಲಾ........? ಕ್ಷಣ ನಾನು ನಾನಾಗಿರಲಿಲ್ಲ ಸಾಮಾನ್ಯ ಹುಡುಗಿಯಾಗಿ ನಿನ್ನೊಲವ ಬಯಸುವವಳಾಗಿದ್ದೆ!

ಮೆಲ್ಲ ಮೆಲ್ಲನೇ ಸನ್ನೆಯಲ್ಲಿ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿಯೊಂದೇ ಅಲ್ಲವೇ?...

ಕ್ಷಣ ಹಾಗನಿಸಿದ್ದು ನಿಜ, ಹೊಂಗನಸುಗಳ ಉತ್ಸವದಲ್ಲಿ ನನ್ನ ಪ್ರೀತಿಯ ತೇರು ಸದ್ದೇ ಇಲ್ಲದೇ ಚಲಿಸತೊಡಗಿತ್ತು. ಆದರೆ ದೇವರ ಆಣತಿಯಂತೆ ತೇರು ಬಿರುಗಾಳಿಗೆ ಸಿಲುಕಿದೆ ಆದರೂ ನನ್ನಂತರಂಗ ಪ್ರೀತಿಗೆ ಇನ್ನು ಸ್ಪಂದಿಸುತ್ತಿದೆ. ನನ್ನೊಲವಿನ ನೀನು ಎಲ್ಲಿರುವೇ, ಹೇಗಿರುವೆ? ಅಂತೆಲ್ಲಾ ನಾನು ಕೇಳುದಿಲ್ಲ ಯಾಕೆಂದರೆ ನನಗೆ ಗೊತ್ತು ನೀ ಚೆನ್ನಾಗಿರುವೆ ಎಂದು. ಒಂದಂತು ನಿಜ ನನ್ನ ಪ್ರೀತಿ ಮಾತ್ರ ಕೊಂಚವು ನಿನ್ನಿಂದ ದೂರ ಸರಿದಿಲ್ಲ. ಮತ್ತೆ ನೀನೆಂದು ನನ್ನ ಬದುಕಿನೊಳಗೆ ಬರಲಾರೆಯೊಂಬುದು ಗೊತ್ತು, ಆದರೆ ನಿನ್ನ ಪ್ರೀತಿಯನ್ನಗಲಿ ಬಾಳುವ ನರಕಯಾತನೆ ನನ್ನಿಂದ ಸಹಿಸಲಾಗುತ್ತಿಲ್ಲ.


ನಿನ್ನ ಬಿಟ್ಟು ಹೇಗಿರಬೇಕು?
ಹೇಳು ನನ ಪ್ರಾಣವೇ....?


ಇಂತೀ ನಿನ್ನ ಪ್ರೀತಿಯ
ನಿನ್ನೊಲವಿನಳು

No comments:

Post a Comment